ನ್ಯೂಸ್

ಭೂಗತ ವಿದ್ಯುತ್ ಉತ್ಪಾದನೆ ನಾಲ್ಕು ಸಾವಿರ ಮನವಿ!

ಅರವಿಂದ ಅಕ್ಲಾಪುರ

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ಈವರೆಗೆ ನಾಲ್ಕು ಸಾವಿರ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಈ ಮನವಿಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ. ಇದರ ಒಟ್ಟು ಸಾರಾಂಶದ ವರದಿಯನ್ನು ಸರ್ಕಾರಕ್ಕೆ ಇನ್ನೊಂದು ವಾರದಲ್ಲಿ ಕಳುಹಿಸಿಕೊಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಗಲ್‌ನಲ್ಲಿ ಅಹವಾಲು ಸ್ವೀಕಾರ ಸಭೆ ನಡೆಸಲಾಗಿತ್ತು. ಯೋಜನೆಯಿಂದ ಸಂತ್ರಸ್ತರಾಗುವವರ ಸಭೆಯನ್ನು ಸಾಗರದಲ್ಲಿ ನಡೆಸಲಾಯಿತು. ಆ ಸಭೆಯಲ್ಲಿ ಕೆಲವರು ಯೋಜನೆಗೆ ಸಹಮತ ವ್ಯಕ್ತಪಡಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಯೋಜನೆಯ ಸಂಪೂರ್ಣ ಡಿಪಿಆರ್‌ಅನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಅನೇಕರು ಬೇಡಿಕೆ ಇರಿಸಿದ್ದಾರೆ. ಈಗಾಗಲೇ ಕೆಪಿಸಿಎಲ್‌ನಿಂದ ಅನೇಕ ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗಿದೆ. ಕೆಲ ಮಾಹಿತಿಗಳು ಭದ್ರತೆ ಮತ್ತಿತರ ಕಾರಣದಿಂದ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಎಲ್ ತಿಳಿಸಿದೆ. ಇದರಲ್ಲಿ ಜಿಲ್ಲಾಡಳಿತದ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭೂಗರ್ಭ ಜಲವಿದ್ಯುತ್ ಘಟಕ ಹಾಗೂ ಪೈಪ್‌ಲೈನ್ ಅಳವಡಿಕೆಗೆ ಪ್ರತ್ಯೇಕವಾಗಿ ಎರಡು ಟೆಂಡರ್‌ಗಳನ್ನು ಆಹ್ವಾನಿಸಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಮುಖ್ಯವಾಗಿ ಜನರ ಅಹವಾಲು ಆಲಿಸುವುದು ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಮಾತ್ರ ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಉಳಿದ ಪ್ರಕ್ರಿಯೆಗಳಿಗೂ ಜಿಲ್ಲಾಡಳಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ನನಗಿಲ್ಲ. ಈಗ ಜನರ ಅಹವಾಲು ಆಲಿಸಿದ ಬಳಿಕ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಯೋಜನೆಗೆ ನಿರಾಕ್ಷೇಪಣೆ ಪತ್ರ ನೀಡುವುದು ಅಥವಾ ನೀಡದೇ ಇರುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.

ಅವಕಾಶ ಇರುವ ದಾಖಲೆಗಳನ್ನು ಕೆಪಿಸಿಎಲ್ ಸಾರ್ವಜನಿಕರಿಗೆ ಮುಕ್ತವಾಗಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ಆದೇಶ ಬಂದರೆ ಮತ್ತಷ್ಟು ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಬಹುದು. ಸಾರ್ವಜನಿಕ ವಲಯದಿಂದ ಕೇಳಿ ಬಂದಿರುವ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.