ಜೈಪುರ: ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದೆ. ಮದನ್ ಲಾಲ್ ಸೈನಿ ಅವರು 2019ರಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಹನುಮಾನ್ ಪ್ರಸಾದ್ ಸೈನಿ, ಅವರ ಪತ್ನಿ ತಾರಾ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಂಜು ಮತ್ತು ಪೂಜಾ ಎಂದು ಗುರುತಿಸಲಾಗಿದೆ. ನಾಲ್ವರು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಪ್ರಾಥಮಿಕ ವರದಿಯ ಪ್ರಕಾರ ಕಳೆದ ಸೆಪ್ಟೆಂಬರ್ನಲ್ಲಿ ದಂಪತಿಯ ಕಿರಿಯ ಮಗ (17-18ರ ನಡುವಿನ ವಯಸ್ಸು) ಮೃತಪಟ್ಟಿದ್ದರಿಂದ ಇಡೀ ಕುಟುಂಬ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿತ್ತೆಂದು ಹೇಳಲಾಗಿದೆ.
ಆತ್ಮಹತ್ಯೆ ಸುದ್ದಿ ತಿಳಿದ ಬೆನ್ನಲ್ಲೇ ಉದ್ಯೋಗ್ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಕರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕುನ್ವಾರ್ ರಾಷ್ಟ್ರದೀಪ್ ಸಹ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಸಿಕರ್ನಲ್ಲಿನ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಹನುಮಾನ್ ಪ್ರಸಾದ್ ಬರೆದಿದ್ದಾರೆ ಎನ್ನಲಾದ ಡೆತ್ನೋಟ್ ಪತ್ತೆಯಾಗಿದ್ದು, ಅದರ ಪ್ರಕಾರ ಮಗನನ್ನು ಕಳೆದುಕೊಂಡು ಹನುಮಾನ್ ಕುಟುಂಬ ಬದುಕಲು ಕಷ್ಟಪಡುತ್ತಿದ್ದರಂತೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
ಹನುಮಾನ್ ಪ್ರಸಾದ್ ಸೈನಿ ಅವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (2018) ದಿವಂಗತ ಮದನ್ ಲಾಲ್ ಸೈನಿ ಅವರ ಸೋದರಸಂಬಂಧಿ. ವಸುಂಧರಾ ರಾಜೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮದನ್ ಲಾಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ