Breast milk : ಎದೆ ಹಾಲು ಗಂಟಲಿನಲ್ಲಿ ಸಿಲುಕಿಕೊಂಡು ನಾಲ್ಕು ತಿಂಗಳ ಹೆಣ್ಣು ಮಗು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರು ತಾಲೂಕಿನ ಮೀನಾಕ್ಷಿಪುರಂನ ಬುಡಕಟ್ಟು ಪ್ರದೇಶದಲ್ಲಿ ವಾಸಿಸುವ ಪಾರ್ಥಿಪನ್ ಮತ್ತು ಸಂಗೀತ ದಂಪತಿಯ 4 ತಿಂಗಳು ಹಸುಗೂಸು ಮೃತಪಟ್ಟಿದೆ. ಹಾಲುಣಿಸುವಾಗ ಮಗು ಇದ್ದಕ್ಕಿದ್ದಂತೆ ಕೈ-ಕಾಲುಗಳನ್ನು ಆಡಿಸುವುದನ್ನು ನಿಲ್ಲಿಸಿದೆ. ಇದರಿಂದ ಆಘಾತಕಗೊಂಡ ಪಾಲಕರು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.
ಎದೆ ಹಾಲು ಶ್ವಾಸನಾಳದಲ್ಲಿ ಸಿಲುಕಿಕೊಂಡ ಕಾರಣ ಮಗು ಮೃತಪಟ್ಟಿದೆ. ಈ ಘಟನೆ ಬೆನ್ನಲ್ಲೇ ದಂಪತಿ, ಆರೋಗ್ಯ ಕಾರ್ಯಕರ್ತರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾರ್ಯಕರ್ತರಿಂದ ಯಾವುದೇ ಸಹಾಯ ಅಥವಾ ಪೋಷಣೆ ಸಿಗಲಿಲ್ಲ ಎಂದು ತಾಯಿ ಸಂಗೀತಾ ಹೇಳಿದ್ದಾರೆ.
ಮಗು ಅಪೌಷ್ಟಿಕತೆಯಿಂದ ಬಳಲುತ್ತಿತ್ತು. ಈ ಬಗ್ಗೆ ನೆಲ್ಲಿಮೇಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ ನಂತರವೂ ಅಗತ್ಯ ನೆರವು ಸಿಗಲಿಲ್ಲ ಎಂದು ಸಂಗೀತಾ ಆರೋಪಿಸಿದ್ದಾರೆ. ಅಲ್ಲದೆ, ಗರ್ಭಿಣಿಯರಿಗೆ ನೀಡಲಾಗುವ ಮಾಸಿಕ 2,000 ರೂ. ಸಹಾಯಧನವನ್ನು ಸಹ ತಮಗೆ ನೀಡಲಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ನಮ್ಮ ಮೊದಲ ಮಗು ಕೂಡ ಇದೇ ರೀತಿಯಲ್ಲಿ ಮೃತಪಟ್ಟಿತು ಎಂದು ದಂಪತಿ ತಿಳಿಸಿದ್ದಾರೆ. (ಏಜೆನ್ಸೀಸ್)