ನ್ಯೂಸ್

ಹಿಂದೂ ದೇವಾಲಯ ಧ್ವಂಸಕ್ಕೆ ಯತ್ನ ಆರೋಪದಡಿಯಲ್ಲಿ ಬಂಧಿತರಾಗಿದ್ದ ನಾಲ್ವರು ಅಪ್ರಾಪ್ತ ಬಾಲಕರು ಬಂಧನ ಮುಕ್ತ

ಥರ್ಪಾಕರ್​: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥರ್ಪಾಕರ್​ ಜಿಲ್ಲೆಯ ಹಿಂದೂ ದೇವಾಲಯವೊಂದರಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ನಾಲ್ವರು ಅಪ್ರಾಪ್ತ ಬಾಲಕರನ್ನು ಶನಿವಾರ ಬಂಧನ ಮುಕ್ತಗೊಳಿಸಲಾಗಿದೆ. ದೂರುದಾರ ದೂರನ್ನು ವಾಪಾಸು ಪಡೆದಿರುವುದಾಗಿ ತಿಳಿಸಲಾಗಿದೆ.

ನಾಲ್ಕು ಅಪ್ರಾಪ್ತ ಬಾಲಕರು ಜನವರಿ 26ರಂದು ಹಿಂದೂ ದೇವಾಲಯಕ್ಕೆ ನುಸುಳಿದ್ದರು. ಅಲ್ಲಿನ ದೇವಾಲಯಗಳನ್ನು ಅಪವಿತ್ರಗೊಳಿಸಿ, ದೇವಸ್ಥಾನವನ್ನು ಧ್ವಂಸ ಮಾಡುವ ಪ್ರಯತ್ನ ಮಾಡಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಪ್ರೇಮ್​ ಕುಮಾರ್​ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೇವಸ್ಥಾನದ ಹುಂಡಿಯ ದುಡ್ಡನ್ನು ಕದಿಯುವ ಪ್ರಯತ್ನ ಮಾಡಿದ್ದೆವೆಂದು ಆರೋಪಿಗಳು ಒಪ್ಪಿಕೊಂಡಿದ್ದರು. ಆ ಹೇಳಿಕೆಯ ಮೇರೆಗೆ ಅವರ ಮೇಲೆ ಎಫ್ಐಆರ್​ ದಾಖಲು ಮಾಡಲಾಗಿತ್ತು. ಸ್ಥಳೀಯ ಹಿಂದೂ ಪಂಚಾಯತ್​ ನಾಯಕರ ಕೋರಿಕೆಯ ಮೇರೆಗೆ ಪ್ರೇಮ್​ ಕುಮಾರ್​ ದೂರನ್ನು ವಾಪಾಸು ಪಡೆದಿದ್ದು ಆರೋಪಿಗಳನ್ನು ಬಂಧನ ಮುಕ್ತ ಮಾಡಲಾಗಿದೆ.

ಬಾಲಕರನ್ನು ಶನಿವಾರ ಮಿಥಿಯಾ ಜಿಲ್ಲಾ ಮತ್ತು ಸೆಷನ್​ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಅವರ ವಿರುದ್ಧದ ಆರೋಪವನ್ನು ಹಿಂಪಡೆದಿದ್ದರಿಂದಾಗಿ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. (ಏಜೆನ್ಸೀಸ್​)