ಹುಬ್ಬಳ್ಳಿ: ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳಲು ಚೆಕ್ಪೋಸ್ಟ್ನಲ್ಲಿ ಸುಳ್ಳು ಹೇಳಿ ಮನೆ ಸೇರಿಕೊಂಡಿದ್ದ ಕುಟುಂಬಕ್ಕೆ ಗುರುವಾರ ತಡರಾತ್ರಿ ಶಾಕ್ ಕಾದಿತ್ತು. ಆ ಮನೆ ಬಾಗಿಲಿಗೆ ಬಂದ ಅಧಿಕಾರಿಗಳು ಒಂದೇ ಕುಟುಂಬದ ನಾಲ್ವರನ್ನು ಆಂಬುಲೆನ್ಸ್ ಮೂಲಕ ಕರೆದೊಯ್ದರು.
ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿರುವ ಈ ಕುಟುಂಬವು ಆಂಧ್ರಪ್ರದೇಶ ತೆರಳಿತ್ತು. ಲಾಕ್ಡೌನ್ ಘೋಷಣೆಯಿಂದಾಗಿ ಅಲ್ಲೇ ಉಳಿಯುವಂತಾಗಿತ್ತು. ಮೂರ್ನಾಲ್ಕು ದಿನದ ಹಿಂದೆಯೇ ಜಿಲ್ಲೆಗೆ ವಾಪಸ್ ಬಂದಿದೆ. ಆದರೆ, ಹೊರ ರಾಜ್ಯದಿಂದ ಬಂದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿರಲಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಆಂಧ್ರದಿಂದ ಬಂದಿದ್ದ ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಆಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದೆ. ಈ ಘಟನೆಯ ಬಳಿಕ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.
'ಸುರಕ್ಷಿತವಾಗಿರಿ, ಜತೆಗೆ ಇತರರ ಸುರಕ್ಷತೆಯನ್ನೂ ಕಾಪಾಡಿ. ಕರೊನಾ ಮಣಿಸುವ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿಯುತವಾಗಿ ವರ್ತಿಸಬೇಕು' ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡು ಅಜಾಗರೂಕತೆಯಿಂದ ವರ್ತಿಸುತ್ತಿರುವುದು ವಿಪರ್ಯಾಸ.