ಮಂಡ್ಯ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ನಾಗಮಂಗಲ ತಾಲೂಕಿನ ತಿರುಮಲಪುರ ಗೇಟಿನ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿಂದು (ಜೂ. 4) ನಡೆದಿದೆ.
ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಹೇಮಂತ್, ಶರತ್ ಹಾಗೂ ನವೀನ್ ಸೇರಿ ನಾಲ್ವರ ಸಾವಾಗಿದೆ. ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ. ಮೃತರು ಬೆಂಗಳೂರಿನ ನೆಲಮಂಗಲ ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಲಾರಿ ಮತ್ತು ಕಾರು ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿತ್ತು. ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದ್ದು, ನಾಲ್ವರು ಕೂಡ ಕಾರಿನಲ್ಲೇ ಅಸುನೀಗಿದ್ದಾರೆ. ಘಟನೆಯ ಬಳಿಕ ಲಾರಿ ಚಾಲಕ ಎಸ್ಕೇಪ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ, ಸಿಪಿಐ ಹಾಗೂ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)