ಮುಂಬೈ: ತಮ್ಮ ಹೊಲದಲ್ಲಿ ಸಾಕಲಾಗಿದ್ದ ಮೇಕೆ ಹಾಗೂ ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಶಂಕೆಯ ಮೇರೆಗೆ ಯುವಕರ ಗುಂಪೊಂದು ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಬಾಲಕರನ್ನು ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಶ್ರೀರಾಮ್ಪುರ ತಾಲ್ಲೂಕಿನಲ್ಲಿ ನಡೆದಿದೆ.
ಘಟನೆಯು ಶ್ರೀರಾಮ್ಪುರ ತಾಲ್ಲೂಕಿನ ಹರೇಗಾಂವ್ ಎಂಬ ಗ್ರಾಮದಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕಳ್ಳತನ ಶಂಕೆ ಮೇಲೆ ನಾಲ್ವರು ಬಾಲಕರನ್ನು ಅಮಾನುಷವಾಗಿ ಥಳಿಸಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ. ಹಲ್ಲೆ ನಡೆಸಿದ ದುರುಳರು ತಮ್ಮ ಎಂಜಲನ್ನು ಸಹ ನೆಕ್ಕುವಂತೆ ಮಾಡಿದ್ದಾರೆ. ಈ ರೀತಿ ಅಮಾನವೀಯ ಕೃತ್ಯಗಳನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ.
ಈ ಜಾತಿ ತಾರತಮ್ಯ, ಬಹಿಷ್ಕಾರ, ನಿಂದನೆ, ಅವಮಾನ, ಹಿಂಸಾಚಾರ ಮತ್ತು ಕ್ರೌರ್ಯ ಹೊಸದೇನೂ ಅಲ್ಲ, ಸರಕಾರದ ಉದಾಸೀನತೆಯೂ ಅಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶವನ್ನು ಬಿಜೆಪಿ ದಲಿತರ ಮೇಲಿನ ದೌರ್ಜನ್ಯದ ಪ್ರಯೋಗಾಲಯವನ್ನಾಗಿ ಮಾಡಿದೆ: ಮಲ್ಲಿಕಾರ್ಜುನ ಖರ್ಗೆ
ವಿಚಾರ ಬೇಳಕಿಗೆ ಬರುತ್ತಿದ್ದಂತೆ ಬಾಲಕರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಸಂತ್ರಸ್ತರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ರೀತಿಯ ಹೇಯ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವ ಮಾತಿಲ್ಲ ಎಂದು ಹೇಳಿದ್ದಾರೆ.