ನ್ಯೂಸ್

ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ನಾಲ್ಕು ರೈಲು ಬೋಗಿಗಳು!

ನವದೆಹಲಿ: ಇಂದು (ಜೂ.03) ದೆಹಲಿಯ ಸರಿತಾ ವಿಹಾರ್‌ನಲ್ಲಿ ತಾಜ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಅಗ್ನಿ ಅವಘಡ ಸಂಭವಿಸಿದ್ದು, ತಕ್ಷಣವೇ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿ, ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

"ತಾಜ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ನಮಗೆ ಇಂದು ಸಂಜೆ 4.24ಕ್ಕೆ ಕರೆ ಬಂದಿತು. ತಕ್ಷಣವೇ ಎಂಟು ಅಗ್ನಿಶಾಮಕ ದಳವನ್ನು ಸೇವೆಗೆ ಕಳುಹಿಸಲಾಗಿದ್ದು, ಬೆಂಕಿಯನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಘಟನೆಯಲ್ಲಿ ಸಾವು ನೋವು ಸಂಭವಿಸಿದ ಯಾವುದೇ ವರದಿಗಳು ಇಲ್ಲಿಯವರೆಗೆ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).