ಸಾಂದರ್ಭಿಕ ಚಿತ್ರ  
ನ್ಯೂಸ್

ನದಿಯಲ್ಲಿ ಕೊಚ್ಚಿಹೋದ್ರು ಪೊಲೀಸರ ನಾಲ್ವರು ಮಕ್ಕಳು; ಮೂವರ ಶವ ಪತ್ತೆ, ಇನ್ನೊಬ್ಬನಿಗಾಗಿ ಹುಡುಕಾಟ..

ಪಾಟ್ನಾ: ಆಟ ಆಡಲೆಂದು ಹೋದವರು ಮರಳಿ ಬರುವಾಗ ಸ್ನಾನಕ್ಕೆಂದು ನೀರಿಗಿಳಿದು ನದಿಯಲ್ಲಿ ಕೊಚ್ಚಿಹೋಗಿ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ನಾಲ್ವರೂ ಪೊಲೀಸರ ಮಕ್ಕಳು ಎಂಬುದು ತಿಳಿದುಬಂದಿದೆ.

ಪಾಟ್ನಾದ ಬುದ್ಧ ಕಾಲನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್​ಸಿಟಿ ಘಾಟ್ ಪ್ರದೇಶದಲ್ಲಿ ಗಂಗಾ ನದಿ ತೀರದಲ್ಲಿ ಈ ದುರಂತ ಸಂಭವಿಸಿದೆ. ಒಟ್ಟು ಆರು ಮಂದಿ ಬಾಲಕರು ಜತೆಗಿದ್ದು ಆ ಪೈಕಿ ನಾಲ್ವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಆರೂ ಮಂದಿ ಪೊಲೀಸರ ಮಕ್ಕಳಾಗಿದ್ದು, ಎಲ್ಲರೂ ಒಟ್ಟಿಗೆ ಬೆಳಗ್ಗೆ ಕ್ರಿಕೆಟ್ ಆಡಲು ಹೋಗಿದ್ದರು. ಮರಳಿ ಬರುವಾಗ ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು. ಆಗ ಒಬ್ಬ ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಇತರರೂ ಮುಂದಾಗಿದ್ದು, ಬಳಿಕ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬೆಳಗ್ಗೆ 11.30 ರ ಸುಮಾರಿಗೆ ಈ ಪ್ರಕರಣ ನಡೆದಿದ್ದು, ಘಟನೆ ನಡೆದ ಅರ್ಧ ಗಂಟೆಯಲ್ಲಿ ಮೂವರ ಶವ ಪತ್ತೆ ಮಾಡಲಾಗಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.