ನ್ಯೂಸ್

25 ಅಡಿ ಭುವನೇಶ್ವರಿ ಪ್ರತಿಮೆಗೆ ಗುರುವಾರ ಶಂಕುಸ್ಥಾಪನೆ

ಬೆಂಗಳೂರು: ನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷದ ತುಂಬುತ್ತಿರುವ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಸರ್ಕಾರ, ಗುರುವಾರ ವಿಧಾನಸೌಧ ಆವರಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಪ್ರತಿಮೆ ಶಂಕುಸ್ಥಾಪನೆಗೆ ಭೂಮಿಪೂಜೆ ನೆರವೇರಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ಸಚಿವರು, ಶಾಸಕರು, ಸಭಾಧ್ಯಕ್ಷರು ಮತ್ತು ಸಭಾಪತಿಗಳು ಈ ವೇಳೆ ಉಪಸ್ಥಿತರಿರುವರು.

ಪ್ರತಿಮೆ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಸಭೆ ನಡೆಸಿ, ಕನ್ನಡ ಭವನದ ಅವರಣದಲ್ಲಿ ಪ್ರತಿಮೆ ಸ್ಥಾಪಿಸುವ ಬಗ್ಗೆ ಚರ್ಚೆಯಾಗಿತ್ತು. ಅಂತಿಮವಾಗಿ ವಿಧಾನಸೌಧದ ಆವರಣದಲ್ಲೇ ಸ್ಥಾಪನೆಗೆ ಒಲವು ವ್ಯಕ್ತವಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ 8ರಿಂದ 11 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆಯನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಿರ್ಮಿಸಬೇಕೆಂದು ಯೋಜನೆ ಸಿದ್ಧಪಡಿಸಲಾಗಿತ್ತು. ಸರ್ಕಾರದ ಬದಲಾದಂತೆ ಪ್ರತಿಮೆ ಸ್ಥಾಪನೆ ಸ್ಥಳವೂ ಬದಲಾಯಿತು.

ಕಲಾವಿದ ಕೆ.ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಲಲಿತಕಲಾ ಅಕಾಡೆಮಿ ಅಧ್ಯಕ್ಷರ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಾರಸು ಮಾಡಿತ್ತು. ಅದೇ ರೀತಿಯ ನಾಡದೇವಿಯ 25 ಅಡಿಯ ಪ್ರತಿಮೆ ಸಿದ್ಧವಾಗುತ್ತಿದೆ.

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ವಿಧಾನಸೌಧದ ಆವರಣದಲ್ಲಿ ಕಿರು ಉದ್ಯಾನ ಸಹಿತ ಕನ್ನಡ ನಾಡಿನ ಸಾಂಸ್ಕೃತಿ ವೈಭವ, ಗತಕಾಲದ ವಿಷಯ ಪ್ರತಿಬಿಂಬಿಸುವ ಚಿತ್ರಣ ಕಟ್ಟಿಕೊಡಲು ಉದ್ದೇಶವಿದೆ.

ಮೊದಲು ಎರಡು ಅಡಿಯ ಪ್ರತಿಮೆ ಸಿದ್ಧಪಡಿಸಿ, ಅದನ್ನು ‘ತ್ರಿ’ಡಿ ರೂಪಾಂತರದಲ್ಲಿ ಗಮನಿಸಿ ಬಳಿಕ 25 ಅಡಿ ಪ್ರತಿಮೆ ಅನಾವರಣ ಕೆಲಸ ನಡೆಸಲು ಸರ್ಕಾರ ಸೂಚನೆ ನೀಡಿತ್ತು. ಆ ಪ್ರಯತ್ನ ಭರದಿಂದ ಸಾಗಿದೆ.

ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಲಾಗುತ್ತಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮ ರೂಪಿಸಿ ವರ್ಷವಿಡೀ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಇದರ ಭಾಗವಾಗಿ 25 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಯೂ ಒಳಗೊಂಡಿದೆ.

25 ಅಡಿ ಕಂಚಿನ ಪ್ರತಿಮೆಗೆ 12 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ಇಲಾಖೆ ಸಚಿವರು ನಿರಂತರ ಸಭೆ ನಡೆಸಿದ್ದಾರೆ. ನವೆಂಬರ್ 1ರೊಳಗೆ ಕಂಚಿನ ಪ್ರತಿಮೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ತಜ್ಞ ಕಲಾವಿದರೊಂದಿಗೆ ಚರ್ಚಿಸಲಾಗಿದೆ.

ನಾಡದೇವತೆಯು ಕುಳಿತಿರುವ ಭಂಗಿಯಲ್ಲಿ ಇದ್ದು, ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವ ಇರಲಿದೆ. ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿ, ಕುತ್ತಿಗೆಯಲ್ಲಿ ಕಂಠಿ, ಕರ್ನಾಟಕ ಲಾಂಛನ ಗಂಡ ಭೇರುಂಡ ಪದಕ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿರುತ್ತದೆ.

ಬಲಗೈಯಲ್ಲಿ ರಕ್ಷಣೆಯ ಧ್ಯೋತಕವಾಗಿ ಅಭಯ ಮುದ್ರೆ, ಎಡಗೈಯಲ್ಲಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ ಪ್ರತಿಬಿಂಬಿಸುವ ತಾಳೆಗರಿ ಇರುವಂತೆ ಚಿತ್ರಿಸಲಾಗಿದೆ. ದೇವಿಯ ಎಡ ಭುಜದ ಮೇಲೆ ಕನ್ನಡ ಧ್ವಜ, ಹಿನ್ನೆಲೆಯಲ್ಲಿ ನಾಡಿನ ನಕ್ಷೆ ಇರಲಿದೆ.