ಚಿಕ್ಕಮಗಳೂರು: ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಅವರಿಗೆ ವಯಸ್ಸಾಗಿದೆ. ಅವರ ಆರೋಗ್ಯ ಸರಿಯಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ನನ್ನ ವರ್ಚಸ್ಸು ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಆರೋಗ್ಯವಾಗಿದ್ದೇನೆ. ಮುಂಬರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಚ್ಛೆ ಇದೆ ಎಂದು ತಿಳಿಸಿದರು.
ಅನೇಕ ಅಭಿಮಾನಿಗಳು, ಸಮಾನ ಮನಸ್ಕರು ಎರಡು ತಿಂಗಳಿನಿಂದ ತಂಡವಾಗಿ ಶೃಂಗೇರಿ, ತರೀಕೆರೆ, ಮೂಡಿಗೆರೆ, ಚಿಕ್ಕಮಗಳೂರು ಕ್ಷೇತ್ರದಾದ್ಯಂತ ನನ್ನ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಶಾಸಕರೂ ನನ್ನ ಪರವಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ನನಗೆ ತುಂಬ ಪರಿಚಯ ಇರುವ ಕ್ಷೇತ್ರ. ಎರಡೂ ಜಿಲ್ಲೆಗಳಲ್ಲಿ ನನ್ನ ಪರವಾಗಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಈ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
ಕಾಂಗ್ರೆಸ್ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ನನ್ನ ಜೀವನದ ಅಂತ್ಯದವರೆಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು