ನ್ಯೂಸ್

ಮೋಸದಿಂದ ಸನ್​ ಟಿವಿ ಮೇಲೆ ಹಿಡಿತ: ಕಲಾನಿಧಿ ಮಾರನ್​ ವಿರುದ್ಧ ಸಹೋದರ ದಯಾನಿಧಿ ಗಂಭೀರ ಆರೋಪ! Kalanithi Maran

Kalanithi Maran : ಮಾಜಿ ಕೇಂದ್ರ ಸಚಿವ ಹಾಗೂ ಡಿಎಂಕೆ ಸಂಸದ ದಯಾನಿಧಿ ಮಾರನ್ ತಮ್ಮ ಹಿರಿಯ ಸಹೋದರ ಹಾಗೂ ಮಾಧ್ಯಮ ಲೋಕದ ದೊರೆ ಕಲಾನಿಧಿ ಮಾರನ್​ ವಿರುದ್ಧ ಲೀಗಲ್​ ನೋಟಿಸ್​ ಜಾರಿ ಮಾಡಿದ್ದಾರೆ. 2003ರಲ್ಲಿ ಸನ್ ಟಿವಿ ಪ್ರೈವೇಟ್ ಲಿಮಿಟೆಡ್‌ನ 12 ಲಕ್ಷ ಷೇರುಗಳನ್ನು ಕೇವಲ 1.2 ಕೋಟಿ ರೂ.ಗೆ ಖರೀದಿಸಿದ್ದಾರೆ. ಆದರೆ ಆ ಸಮಯದಲ್ಲಿ ಆ ಷೇರುಗಳ ನಿಜವಾದ ಮೌಲ್ಯ ಸುಮಾರು 3,500 ಕೋಟಿ ರೂ.ಗಳಷ್ಟಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸರಿಯಾಗಿ ಮೌಲ್ಯಮಾಪನ ಮಾಡದೇ, ಇತರ ಷೇರುದಾರರ ಒಪ್ಪಿಗೆ ಅಥವಾ ಯಾವುದೇ ನ್ಯಾಯಯುತ ಪರಿಗಣನೆಯಿಲ್ಲದೇ ಕಲಾನಿಧಿ ಮಾರನ್​ ಅಕ್ರಮವಾಗಿ ಷೇರುಗಳನ್ನು ಖರೀದಿ ಮಾಡಿದ್ದಾರೆ. ಇದರಿಂದಾಗಿಯೇ ಕಲಾನಿಧಿ ಮಾರನ್,​ ರಾತ್ರೋರಾತ್ರಿ ಕಾನೂನುಬಾಹಿರವಾಗಿ ಬಹುಪಾಲು ಷೇರುದಾರರಾದರು ಎಂದು ದಯಾನಿಧಿ ಮಾರನ್​ ಲೀಗಲ್​ ನೋಟಿಸ್‌ನಲ್ಲಿ ಆರೋಪಿಸಿದ್ದಾರೆ.

ನೋಟಿಸ್​ ಪ್ರಕಾರ 2003, ಸೆಪ್ಟೆಂಬರ್ 15ರವರೆಗೆ ಕಲಾನಿಧಿ ಮಾರನ್ ಅವರು ಸನ್​ ಟಿವಿ ಕಂಪನಿಯಲ್ಲಿ ಒಂದೇ ಒಂದು ಪಾಲನ್ನು ಹೊಂದಿರಲಿಲ್ಲ. ಆದರೆ, ಆ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಅವರ ಚಿಕ್ಕಪ್ಪ ಮುರಸೋಳಿ ಮಾರನ್ ಗಂಭೀರ ಅನಾರೋಗ್ಯಕ್ಕೆ ಒಳಗಾದ ಸಮಯದಲ್ಲಿ, ಕಲಾನಿಧಿ, ಕಂಪನಿಯ ಷೇರುಗಳನ್ನು ತಲಾ 10 ರೂ. ಮುಖಬೆಲೆಗೆ ಸ್ವತಃ ಹಂಚಿಕೊಂಡರು. ಇದರಿಂದಾಗಿ ಕಂಪನಿಯ ಮೂಲ ಪ್ರವರ್ತಕರ ಷೇರುಗಳು ದುರ್ಬಲಗೊಂಡಿತು. ಇದು ಮೋಸದ ಮತ್ತು ವಿಶ್ವಾಸಾರ್ಹ ಕರ್ತವ್ಯದ ಉಲ್ಲಂಘನೆಯಾಗಿದೆ ಎಂದು ದಯಾನಿಧಿ ಮಾರನ್​ ಲೀಗಲ್​ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಅದೇ ಲೀಗಲ್​ ನೋಟಿಸ್​ನಲ್ಲಿ ಮತ್ತೊಂದು ಗಂಭೀರ ವಿಚಾರವನ್ನು ದಯಾನಿಧಿ ಮಾರನ್​ ಪ್ರಸಸ್ತಾಪ ಮಾಡಿದ್ದಾರೆ. ಅದೇನೆಂದರೆ, 2003, ನವೆಂಬರ್ 23ರಂದು ಮುರಸೋಲಿ ಮಾರನ್ ಮರಣದ ಕೇವಲ ಮೂರು ದಿನಗಳ ಬೆನ್ನಲ್ಲೇ ಅದು ಕೂಡ ಮರಣ ಪ್ರಮಾಣಪತ್ರವನ್ನು ನೀಡುವ ಮೊದಲೇ ಸಮೂಹ ಕಂಪನಿಗಳಿಂದ ಷೇರುಗಳನ್ನು ವರ್ಗಾಯಿಸಲಾಗಿದೆ. ಆದರೆ, 2003, ನವೆಂಬರ್ 26 ರಂದು ಯಾವುದೇ ಪಕ್ಷಕ್ಕೆ ಯಾವುದೇ ಕಾನೂನುಬದ್ಧ ಮರಣ ಪ್ರಮಾಣಪತ್ರ ಅಥವಾ ಕಾನೂನುಬದ್ಧ ಉತ್ತರಾಧಿಕಾರ ಪ್ರಮಾಣಪತ್ರ ಲಭ್ಯವಿರಲಿಲ್ಲ ಎಂದು ನೋಟಿಸ್​ನಲ್ಲಿ ಹೇಳಿದ್ದು, ಈ ಷೇರು ವರ್ಗಾವಣೆಯನ್ನು ಅಮಾನ್ಯ, ಕಾನೂನುಬಾಹಿರ ಮತ್ತು ಮೋಸ ಎಂದು ಹೇಳಿದ್ದಾರೆ.

ಸನ್ ಟಿವಿಯ ನಿಧಿಯನ್ನೇ ಬಳಸಿಕೊಂಡು ತಮ್ಮ ಚಿಕ್ಕಮ್ಮ ದಯಾಳು ಅಮ್ಮಾಳ್ ಅವರಿಂದಲೇ 100 ಕೋಟಿ ರೂ.ಗಳಿಗೆ ಷೇರುಗಳನ್ನು ಖರೀದಿಸುವುದು ಸೇರಿದಂತೆ, ಕಂಪನಿಯ ಹಣವನ್ನು ಬೇರೆಡೆಗೆ ತಿರುಗಿಸಲು ಕಲಾನಿಧಿ ತಮ್ಮ ನಿಯಂತ್ರಣವನ್ನು ಬಳಸುತ್ತಿದ್ದಾರೆ ಎಂದು ದಯಾನಿಧಿ ಆರೋಪಿಸಿದ್ದಾರೆ. ದಯಾಳು ಅಮ್ಮಾಳ್​ ಅವರು ತಮ್ಮ ಷೇರುಗಳನ್ನು ಉಳಿಸಿಕೊಂಡಿದ್ದರೆ, ಅವರು ಲಾಭಾಂಶದ ಮೂಲಕ ಅದೇ ಮೊತ್ತವನ್ನು ಗಳಿಸುತ್ತಿದ್ದರು ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

2003, ಸೆಪ್ಟೆಂಬರ್ 15ರ ಷೇರುಗಳನ್ನು ಅದರ ಮೂಲ ರಚನೆಗೆ ಮರುಸ್ಥಾಪಿಸುವಂತೆ ಒತ್ತಾಯಿಸಿರುವ ದಯಾನಿಧಿ ಮಾರನ್​, ಒಂದು ವಾರದೊಳಗೆ ಸರಿಪಡಿಸದಿದ್ದರೆ ಗಂಭೀರ ವಂಚನೆ ತನಿಖಾ ಕಚೇರಿ (SFIO), SEBI, ಜಾರಿ ನಿರ್ದೇಶನಾಲಯ ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಕಲಾನಿಧಿ ಮಾರನ್​ಗೆ ಕಳುಹಿಸಿರುವ ಲೀಗಲ್​ ನೋಟಿಸ್​ನಲ್ಲಿ ದಯಾನಿಧಿ ಮಾರನ್​ ಎಚ್ಚರಿಸಿದ್ದಾರೆ.

ಸನ್ ಟಿವಿಯ ಮಾಧ್ಯಮ ಪರವಾನಗಿಗಳು, ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಫ್ರಾಂಚೈಸಿ ಮತ್ತು ಸ್ಪೈಸ್‌ಜೆಟ್‌ನ ವಿಮಾನಯಾನ ಪರವಾನಗಿಯನ್ನು ರದ್ದುಗೊಳಿಸುವಂತೆ ತನಿಖಾ ಸಂಸ್ಥೆಗಳನ್ನು ಒತ್ತಾಯಿಸುವುದಾಗಿ ದಯಾನಿಧಿ ಮಾರನ್​ ಎಚ್ಚರಿಸಿದ್ದಾರೆ. ಕಲಾನಿಧಿ ಮಾರನ್, ಅವರ ಪತ್ನಿ ಕಾವೇರಿ ಕಲಾನಿಧಿ ಮತ್ತು ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವಾರು ಹಣಕಾಸು ಸಲಹೆಗಾರರು ಸೇರಿದಂತೆ ಎಂಟು ವ್ಯಕ್ತಿಗಳಿಗೆ ಈ ಲೀಗಲ್​ ನೋಟಿಸ್ ಕಳುಹಿಸಲಾಗಿದೆ. (ಏಜೆನ್ಸೀಸ್​)