ನ್ಯೂಸ್

ಅನ್ನದಾತನನ್ನು ಮಣ್ಣುಪಾಲು ಮಾಡಲು ಹುನ್ನಾರ : ಹೆದ್ದಾರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Ramanagara

ರಾಮನಗರ : ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯ ಹೆದ್ದಾರಿ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಎಪಿಎಂಸಿ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಸುಮಾರು 3 ಗಂಟೆಗಳಿಗೂ ಹೆಚ್ಚುಕಾಲ ತಡೆದ ರೈತ ಸಂಘದ ನೇತೃತ್ವದ ವಿವಿಧ ಸಂಘಟನೆಗಳು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದವು. ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡ ಪ್ರತಿಭಟನೆ 3 ಗಂಟೆಗೆ ಮುಕ್ತಾಯಗೊಂಡಿತು. ನಂತರ ಹೆದ್ದಾರಿ ತೆರವುಗೊಳಿಸಿದ ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಮಾತನಾಡಿದ ರೈತ ಸಂಘದ ವಿಭಾಗೀಯ ಅಧ್ಯಕ್ಷ ಎಂ.ರಾಮು, ಕೇಂದ್ರ ಸರ್ಕಾರ ಎಪಿಎಂಸಿ, ಭೂ ಸುಧಾರಣಾ ಕಾಯ್ದೆಯಂತಹ ಮಸೂದೆಗಳನ್ನು ಜಾರಿ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಬೆಂಬಲವಾಗಿ ನಿಂತು ಈ ನೆಲದ ಕೃಷಿಕರನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಉಗ್ರರು ಎನ್ನುವ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆದಿದ್ದು ಇದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಜಗಜ್ಜಾಹೀರು ಮಾಡಿದೆ ಎಂದು ಟೀಕಿಸಿದರು. ರೈತ ಮುಖಂಡರಾದ ಹೊಸಪಾಳ್ಯ ಲೋಕೇಶ್, ಮುನಿರಾಜು, ಕೃಷ್ಣಪ್ಪ, ಶಿವಕುಮಾರ್, ತುಂಬೇನಹಳ್ಳಿ ಶಿವಕುಮಾರ್, ಜಯಮ್ಮ, ಕರುನಾಡ ಸೇನೆ ಜಗದೀಶ್, ಜಯಕುಮಾರ್, ಟೊಯೋಟಾ ಕಾರ್ಮಿಕ ಸಂಘಟನೆಯ ಬಸವರಾಜ್ ಹವಾಲ್ದಾರ್ ಮುಂತಾದವರು ಇದ್ದರು. ಎಸ್‌ಡಿಪಿಐ, ಕರುನಾಡ ಸೇನೆ, ರೈತ ಸಂಘದ ವಿವಿಧ ಬಣಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹೋರಾಟ ಹತ್ತಿಕ್ಕಲು ಪ್ರಧಾನಿ ಕಸರತ್ತು

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ರೈತರ ಹೋರಾಟ ಹತ್ತಿಕ್ಕಲು ಪ್ರಧಾನಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ರಸ್ತೆಗೆ ಮೊಳೆ ಹೊಡೆಸುವುದು, ಬ್ಯಾರಿಕೇಡ್ ಅಳವಡಿಸುವುದಲ್ಲದೆ, ಹೋರಾಟನಿರತ ರೈತರಿಗೆ ಆಹಾರ ಪೂರೈಸುತ್ತಿರುವವರ ಪತ್ತೆಗೆ ತನಿಖಾ ತಂಡಗಳನ್ನು ಬಳಸುತ್ತಿರುವುದು ನಾಚಿಕೆಗೇಡು. ಕಾಯ್ದೆಗಳನ್ನು ಹಿಂಪಡೆದರೆ ರೈತರು ಹೋರಾಟದಿಂದ ಹಿಂದೆ ಸರಿಯಲಿದ್ದಾರೆ. ಇಲ್ಲವಾದರೆ ಈ ಕಿಚ್ಚು ಆರುವುದಿಲ್ಲ ಎಂದು ಎಚ್ಚರಿಸಿದರು.

ಸಂಚಾರ ಬದಲು

ಮೊದಲೇ ಸೂಚನೆ ಅರಿತಿದ್ದ, ಪೊಲೀಸ್ ಇಲಾಖೆ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಂಡಿತ್ತು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ವಾಹನಗಳನ್ನು ಬಿಡದಿಯಿಂದಲೇ ಕನಕಪುರ ಮಾರ್ಗವಾಗಿ ಮೈಸೂರಿನತ್ತ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳನ್ನು ಕೈಲಾಂಚದಿಂದ ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರಾಮನಗರದಿಂದ ಸಮೀಪದ ಊರುಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದೇ ಊರು ಸೇರಲು ಮುಂದಾಗಿದ್ದು ಕಂಡುಬಂತು.

ರೈತ ವಿರೋಧಿ ಸರ್ಕಾರಗಳು

ಬಿಡದಿ :  ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರಾಜ್ಯ ರೈತ ಸಂಘ (ರೈತ ಬಣ) ದ ನೂರಾರು ಮುಖಂಡರು ಜಿಲ್ಲಾಧ್ಯಕ್ಷ ಪಿ.ಎಂ.ರವಿ ನೇತೃತ್ವದಲ್ಲಿ ಬಿಡದಿಯಲ್ಲಿ ಶನಿವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪಿ.ಎಂ.ರವಿ, ರೈತ ವಿರೋಧಿ ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನ್ನಣೆ ನೀಡುತ್ತಿಲ್ಲ. ಇದರಿಂದಲೇ ಬಿಜೆಪಿ ರೈತ ವಿರೋಧಿಯಾಗಿದೆ ಎಂದು ತಿಳಿಯಬಹುದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆಗಳು ಸಿಗಬೇಕು. ಆದರೆ ಕೃಷಿ ತಿದ್ದುಪಡಿ ಕಾಯ್ದೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ದಲ್ಲಾಳಿಗಳ ಪರವಾಗಿ ನಿಲ್ಲುವ ತೀರ್ಮಾನವನ್ನು ಸರ್ಕಾರಗಳು ಮಾಡಿವೆ. ಇದನ್ನು ರೈತರು ವಿರೋಧಿಸಿದ್ದು, ಇಂದು ದೇಶಾದ್ಯಂತ ರೈತರ ಹೋರಾಟ ಆಂದೊಲನದ ರೂಪ ಪಡೆದುಕೊಂಡಿದೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು. ಇದರಿಂದ ಕೆಲ ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಂಟಾಗಿತ್ತು.

ರೈತ ಸಂಘ (ರೈತ ಬಣ)ದ ಜಿಲ್ಲಾ ಉಪಾಧ್ಯಕ್ಷ ಸೀನಪ್ಪ, ಕಾರ್ಯದರ್ಶಿ ಶಿವರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾನಾರಾಯಣಸ್ವಾಮಿ, ರಾಮನಗರ ತಾಲೂಕು ಅದ್ಯಕ್ಷ ವೆಂಕಟೇಶ್, ಮಾಗಡಿ ತಾಲೂಕು ಅಧ್ಯಕ್ಷ ಕೇಶವಮೂರ್ತಿ ರೈತ ಮುಖಂಡರಾದ ಯಶೋಧಮ್ಮ, ರಾಮಣ್ಣ, ತಮ್ಮಯ್ಯ, ಮಂಜು, ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೇಶದ ಮಾನ ಹೋಗುವ

ಮುನ್ನ ಎಚ್ಚೆತ್ತುಕೊಳ್ಳಲಿ

ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಅಂಗವಾಗಿ ಜ.26ರಂದು ನಡೆದ ಟ್ರಾೃಕ್ಟರ್ ರ‌್ಯಾಲಿ ವೇಳೆ ಸಂಭವಿಸಿದ ಅವಘಡಗಳಿಗೆ ರೈತರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅಂದಿನ ಘಟನೆಗೆ ರೈತರು ಕಾರಣರಲ್ಲ. ಕೇಂದ್ರ ಸರ್ಕಾರ, ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಸರ್ಕಾರಕ್ಕೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಿ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ದೇಶದ ಮಾನ ಹೋಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತುಕೊಳ್ಳಲಿ ಎಂದರು.