ಹಾಸನ: ಲಿಂಗೈಕ್ಯ ಬಾಲಗಂಗಾಧರ ಶ್ರೀಗಳನ್ನು ಜ್ಞಾಪಿಸಿಕೊಂಡು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಣ್ಣೀರು ಹಾಕಿದ ಪ್ರಸಂಗ ಹಾಸನದಲ್ಲಿಂದು (ಸೆ.26) ನಡೆದಿದೆ.
ಹಾಸನದ ಆದಿ ಚುಂಚನಗಿರಿ ಮಠದಲ್ಲಿ ನಡೆದ ಡಾ. ಬಾಲಗಂಗಾಧರ ಶ್ರೀಗಳ ಸುವರ್ಣ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ಎಚ್ಡಿಡಿ ಕಣ್ಣೀರು ಹಾಕಿದರು.
ನನಗೆ ಏನು ಮಾತನಾಡಬೇಕೋ ಗೊತ್ತಿಲ್ಲ, ನನಗೆ 91ನೇ ವಯಸ್ಸು ನಡೆಯುತ್ತಿದೆ. ನಾವೆಲ್ಲಾ ಶೂದ್ರ ಸಮುದಾಯ, ಯಾರನ್ನು ಮುಟ್ಟಬಾರದು ಅಂತ ಶಾಲೆಯಲ್ಲಿ ನಮ್ಮನ್ನು ಹತ್ತು ಅಡಿ ದೂರದಲ್ಲಿ ಕೂರಿಸುತ್ತಿದ್ದರು. ಕೋಲಲ್ಲಿ ನಮ್ಮನ್ನು ಹೊಡೆದು ಮಾತನಾಡಿಸುತ್ತಿದ್ದರು. ನನ್ನ ಹಳೆಯ ಎಲ್ಲಾ ನೆನಪುಗಳನ್ನು ಇಲ್ಲಿ ತೋರಿದ ಕಿರುಚಿತ್ರದಲ್ಲಿ ವರ್ಣಿಸಿದ್ದಾರೆ ಎಂದರು.
ನಾನು ಜೀವನದಲ್ಲಿ ಅಸತ್ಯ ನುಡಿಯಲ್ಲ ಅದೇ ನನ್ನ ಶಕ್ತಿ ಎಂದು ತಮ್ಮ ಪಕ್ಕದಲ್ಲೇ ಕುಳಿತಿದ್ದ ನಿರ್ಮಾಲಾನಂದ ಶ್ರೀಗಳಿಗೆ ದೇವೇಗೌಡರು ಇದೇ ಸಂದರ್ಭದಲ್ಲಿ ಹೇಳಿದರು. ದಶಕಗಳ ಸಮಸ್ಯೆಯಾದ ಬಾಂಗ್ಲಾದೇಶ-ಭಾರತ ನಡುವಿನ ನೀರಿನ ಹಂಚಿಕೆಯನ್ನು ಹತ್ತೇ ತಿಂಗಳಲ್ಲಿ ಬಗೆಹರಿಸಿದೆ. ಉತ್ತರ ಕರ್ನಾಟಕದಲ್ಲಿ 18 ಕೋಟಿ ಕೊಟ್ಟಿದ್ದೇನೆ. ಹೇಳುತ್ತಾ ಹೋದರೆ ಮಾತನಾಡೋಕೆ ತುಂಬಾ ಇದೆ ಎಂದರು.
ದೇಶದ ಪ್ರಗತಿ ಬಡವರ ಏಳಿಗೆ ಒಂದು ಕಡೆಯಾದರೆ, ಮತ್ತೊಂದು ಕಡೆ ನಾವು ಮೋಕ್ಷ ಬೇಕು ಅಂತ ಕೇಳುತ್ತೇವೆ. ಆದರೆ, ಅದನ್ನು ಕೊಂಡುಕೊಳ್ಳಲು ಆಗುತ್ತಾ? ಮೋಕ್ಷಕ್ಕಾಗಿ ನಾನು ದಿನ ಪ್ರಾರ್ಥನೆ ಮಾಡುತ್ತೇನೆ ಎಂದರು.