ನ್ಯೂಸ್

ಅಂತಾರಾಷ್ಟ್ರೀಯ ಯೋಗ ದಿನ: ದೇಶದ ಜನತೆಗೆ ಮಾಜಿ ಪ್ರಧಾನಿ ಎಚ್​ಡಿಡಿ ವಿಶೇಷ ಸಂದೇಶ

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​. ಡಿ. ದೇವೇಗೌಡ ಅವರು ದೇಶದ ಜನತೆಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಟ್ವೀಟ್​ ಮಾಡಿರುವ ಎಚ್​ಡಿಡಿ ನನ್ನ ಸಹ ಭಾರತೀಯರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನಾನು 91ನೇ ವಯಸ್ಸಿನಲ್ಲಿದ್ದೇನೆ ಮತ್ತು ನಾನಿನ್ನೂ ಉಳಿದುಕೊಳ್ಳಲು ಯೋಗವು ಸಹಾಯ ಮಾಡಿದೆ. ಯೋಗವನ್ನು ಮಾಡಿ, ಅದರ ಲಾಭವನ್ನು ಪಡೆದುಕೊಳ್ಳಲು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇಂದು ವಿಶ್ವವು 9ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ 5.30ಕ್ಕೆ ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ ಅವರ ಮನವಿಯಿಂದಾಗಿ 2015ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾಯಿತು. ಪ್ರತಿ ವರ್ಷ ಜೂನ್​ 21ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವನ್ನು ಆಯುಷ್​ ಸಚಿವಾಲಯದ ಅಡಿಯಲ್ಲಿ ನಡೆಯುತ್ತದೆ. (ಏಜೆನ್ಸೀಸ್​)