ನ್ಯೂಸ್

‘ಕೈ’ ಕುಲಕಲು ಮಾಜಿ ಶಾಸಕಿ ಪೂರ್ಣಿಮಾ ಸಜ್ಜು; ಬಿಜೆಪಿಗೆ ಮತ್ತೊಂದು ಆಘಾತ

ಬೆಂಗಳೂರು: ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಚಾಲ್ತಿಯಲ್ಲಿಟ್ಟಿರುವ ‘ಆಪರೇಷನ್ ಹಸ್ತ’ವು ಬಿಜೆಪಿ ಮಾಜಿ ಶಾಸಕಿಯನ್ನು ಸೆಳೆಯುವಲ್ಲಿ ಸಲವಾಗಿದೆ. ಸಿಎಂ ಅಧಿಕೃತ ನಿವಾಸ ‘ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ನಾಯಕರಿಬ್ಬರ ಅಭಯ, ಸೂಕ್ತ ಸ್ಥಾನಮಾನದ ಭರವಸೆ, ಸಕಾರಾತ್ಮಕ ಸ್ಪಂದನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಸಮ್ಮತಿಸಿದ್ದು, ಅ.20ರಂದು ಪೂರ್ಣಿಮಾ ಹಸ್ತಲಾಘವಕ್ಕೆ ವೇದಿಕೆ ಸಜ್ಜಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೈ ತಂತ್ರಗಾರಿಕೆ

ಲೋಕಸಭೆ ಚುನಾವಣೆಯಲ್ಲಿ ಸ್ಥಾನಗಳ ಗಳಿಕೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ಹೆಣೆದಿದೆ. ಪ್ರಭಾವ, ಪ್ರಬಲರ ಬದಲು ಮತಗಳಿಕೆ ವೃದ್ಧಿಸಿಕೊಳ್ಳಲು ನೆರವಾಗುವವರಿಗೆ ಗಾಳ ಬೀಸಿ, ಆಪ್ತೇಷ್ಟರ ಮೂಲಕ ಮನವೊಲಿಸುತ್ತಿದೆ.

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪ್ರಬಲ ಸಮುದಾಯಗಳಲ್ಲಿ ಗೊಲ್ಲರು ಸೇರಿದ್ದಾರೆ. ಹಿರಿಯೂರು ಕ್ಷೇತ್ರ ಪ್ರತಿನಿಧಿಸಿದ್ದ ಪೂರ್ಣಿಮಾ ಇದೇ ಸಮುದಾಯದವರಾಗಿದ್ದಾರೆ. ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಆಗಿದ್ದ ಪೂರ್ಣಿಮಾ ಶ್ರೀನಿವಾಸ ಬಿಜೆಪಿಗೆ ಸೇರ್ಪಡೆಯಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಗೆದ್ದರೆ, ಕಳೆದ ಚುನಾವಣೆಯಲ್ಲಿ ಸೋಲುಂಡರು.

ಪತಿ ಶ್ರೀನಿವಾಸ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಉಚ್ಚಾಟನೆಯಾಗಿದ್ದರು. ಆಗಿನಿಂದ ಪಕ್ಷ ತೊರೆಯಲು ಪೂರ್ಣಿಮಾ ಅವರಿಗೆ ಆಂತರಿಕ ಒತ್ತಡವಿದ್ದರೂ ಮಂತ್ರಿ ಪದವಿ ಮೇಲೆ ಕಣ್ಣಿಟ್ಟು ಉಳಿದುಕೊಂಡರು.

ಬಿಜೆಪಿ ಆಡಳಿತಾವಧಿಯಲ್ಲಿ ಇನ್ನೇನು ಸಚಿವರಾಗಲಿದ್ದಾರೆ ಎಂದಿತ್ತು. ಆದರೆ ಕೊನೇ ಗಳಿಗೆಯಲ್ಲಿ ಶಶಿಕಲಾ ಜೊಲ್ಲೆ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಲರಾಗಿದ್ದರು. ಸಚಿವ ಸ್ಥಾನ ಸಿಗದ ಬೇಸರ, ಚುನಾವಣೆ ಸೋತ ನೋವು, ಕುಟುಂಬ ಮತ್ತು ಬೆಂಬಲಿಗರ ಒತ್ತಡಕ್ಕೆ ಕೊನೆಗೂ ಒಪ್ಪಿದ ಪೂರ್ಣಿಮಾ ‘ಕೈ’ ಕುಲುಕುತ್ತಿದ್ದಾರೆ.

ಪೂರ್ಣಿಮಾ ಅವರ ತಂದೆ ಮೂಲತಃ ಕಾಂಗ್ರೆಸ್ಸಿಗರಾಗಿದ್ದು, ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಜೆಡಿಎಸ್‌ಗೆ ವಲಸೆ ಹೋಗಿ ಸ್ಪರ್ಧಿಸಿ ಸೋತಿದ್ದರು.