ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಶೀಘ್ರ ಆಯೋಗ(Internal Reservation Commission) ರಚಿಸಬೇಕು ಎಂದು ಮಾಜಿ ಶಾಸಕ ಎಚ್.ಡಿ.ಬಸವರಾಜು ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲಾತಿಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಪ್ರಸ್ತುತ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಒಳಮೀಸಲಾತಿಯ ಬಗ್ಗೆ ಮೌನವಹಿಸಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಗಾಗಿ ಆಯೋಗವನ್ನು ಸ್ಥಾಪಿಸಲು ಮುಂದಾಗಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಕೂಡಲೇ ಪರಿಶಿಷ್ಟ ಪಂಗಡದವರಿಗೆ ಒಳಮೀಸಲಾತಿಗಾಗಿ ಆಯೋಗವನ್ನು ರಚಿಸಿ ಅದರಂತೆ ಕ್ರಮವಹಿಸಬೇಕು. ಅರಣ್ಯ ವಸಾಹತುಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಅಳಿವಿನ ಅಂಚಿನಲ್ಲಿರುವ ಮೂಲನಿವಾಸಿಗಳಿಗೆ ಮೀಸಲಾತಿ ಜಾರಿಗೊಳಿಸಿ ಈ ಸಮುದಾಯ ಮತ್ತು ಅವರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಾತ್ರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಬಸವರಾಜು ಅವರು ಮುಖ್ಯಮಂತ್ರಿಗೆ ನೀಡಿದ ಮನವಿ ಪತ್ರದಲ್ಲಿ ಕೋರಿದ್ದಾರೆ.