ನ್ಯೂಸ್

ಬಸ್​ ಚಾಲಕನ ತಪ್ಪಿಗೆ ಬಲಿಯಾದ ಮಾಜಿ ಮಿಸ್​ ವರ್ಲ್ಡ್​! 60ರ ಹರೆಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅಪರೂಪದ ಮಾಡೆಲ್​ ಇವರು

ಬ್ಯೂನಸ್ ಐರಿಸ್: ಬಸ್ಸು ಚಾಲಕನ ನಿರ್ಲಕ್ಷ್ಯದಿಂದಾಗಿ ಮಾಜಿ ಮಿಸ್​ ವರ್ಲ್ಡ್​ ನಾರ್ಮಾ ಕಪಾಗ್ಲಿ(81) ಸಾವನ್ನಪ್ಪಿದ್ದಾರೆ. ಆರು ದಿನಗಳ ಕಾಲ ಕೋಮಾದಲ್ಲಿದ್ದ ಹಿರಿಯ ಮಾಡೆಲ್​ ಡಿಸೆಂಬರ್​ 22ರಂದು ಅಸು ನೀಗಿದ್ದಾರೆ.

ನಾರ್ಮಾ ಕಪಾಗ್ಲಿ ಅವರು 1960ರಲ್ಲಿ ಅರ್ಜೆಂಟೀನಾದಿಂದ ಮಿಸ್​ ವರ್ಲ್ಡ್​ನಲ್ಲಿ ಭಾಗವಹಿಸಿ, ಜಯ ಸಾಧಿಸಿದ್ದರು. ಆ ಸಮಯಕ್ಕೆ ನಾರ್ಮಾ ಅವರಿಗೆ ಕೇವಲ 21 ವಯಸ್ಸಾಗಿತ್ತು. ಅವರಿಗೆ 500 ಪೌಂಡ್ ಮತ್ತು ಸ್ಪೋರ್ಟ್ಸ್ ಕಾರ್ ಅನ್ನು ಬಹುಮಾನವಾಗಿ ನೀಡಲಾಗಿತ್ತು. ಅರ್ಜೆಂಟೀನಾದಿಂದ ಮಿಸ್​ ವರ್ಲ್ಡ್​ ಗೆದ್ದ ಮೊದಲ ಮಾಡೆಲ್​ ಆಗಿ ಹೊರಹೊಮ್ಮಿದ್ದರು. ಕೇವಲ ಮಾಡೆಲಿಂಗ್​ ಮಾತ್ರವಲ್ಲದೆ ಸಂಗೀತ ಕ್ಷೇತ್ರಕ್ಕೂ ಕಾಲಿಟ್ಟ ನಾರ್ಮಾ, 1962ರಲ್ಲಿ, ಇಟಾಲಿಯನ್ ಪಿಟೀಲು ವಾದಕ ಅರ್ಮಾಂಡೋ ಅವರ ಸಹಯೋಗದೊಂದಿಗೆ 'ಸೆಕ್ಸಿ ವರ್ಲ್ಡ್' ಹಾಡಿಗೆ ಧ್ವನಿ ನೀಡಿದ್ದರು. ನಂತರ ಬ್ರೆಜಿಲ್​ಗೆ ತೆರಳಿ ಅಲ್ಲಿ ಜೀನವ ಆರಂಭಿಸಿದ್ದರು. 1989ರಲ್ಲಿ ಅರ್ಜೆಂಟೀನಾಕ್ಕೆ ವಾಪಾಸಾಗಿ ಅಲ್ಲಿಯೇ ವಾಸ ಹೂಡಿದ್ದರು.

ತಮ್ಮ 60ರ ಹರೆಯದವರೆಗೆ ಒಬ್ಬಂಟಿಯಾಗಿಯೇ ಜೀವನ ಕಳೆದ ನಾರ್ಮಾ, 60ರ ವಯಸ್ಸಿನಲ್ಲಿ ಇಟಾಲಿಯನ್ ಉದ್ಯಮಿಯೊಬ್ಬರನ್ನು ವಿವಾಹವಾದರು. ನಂತರ ಫ್ಯಾಷನ್ ಉದ್ಯಮಕ್ಕೆ ವಿದಾಯ ಹೇಳಿದರು. ಅವರು ಇಟಾಲಿಯನ್ ನಿಯತಕಾಲಿಕೆಯ ಮುಖ್ಯ ಮಾರುಕಟ್ಟೆಯ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.

ಡಿಸೆಂಬರ್​ 17ರಂದು ನಾರ್ಮಾ ಅವರು ತಮ್ಮ ಮನೆಯ ಬಳಿ ನಡೆದು ಹೋಗುವಾಗ, ಬಸ್ಸೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ಗಂಭೀರ ಗಾಯಾಳುವಾದ ನಾರ್ಮಾ ಕೋಮಾಕ್ಕೆ ಹೋಗಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದಾಗಿ ಆರು ದಿನಗಳ ಕಾಲ ಕೋಮಾದಲ್ಲಿದ್ದ ನಾರ್ಮಾ ಮಂಗಳವಾರದಂದು ಇಹಲೋಕ ತ್ಯಜಿಸಿದ್ದಾರೆ.

ಅಪಘಾತದ ಕುರಿತಾಗಿ ಪೊಲೀಸ್​ ಪ್ರಕರಣ ದಾಖಲಾಗಿದ್ದು, 28 ವರ್ಷದ ಬಸ್​ ಡ್ರೈವರ್​ನ್ನು ನ್ಯಾಯಾಂಗ ಬಂಧಕ್ಕೆ ಒಳಪಡಿಸಲಾಗಿದೆ. ಬಸ್ಸನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)