ನ್ಯೂಸ್

ದಿಗಂತ್ ನಾಪತ್ತೆ ಪ್ರಕರಣ ಕೋಮು ಸಾಮರಸ್ಯ ಕದಡಲು ಯತ್ನಿಸಿದವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಮಾಜಿ ಸಚಿವ ರಮಾನಾಥ ರೈ ಒತ್ತಾಯ

ಮಂಗಳೂರು: ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಮತೀಯವಾದಿ ಸಂಘಟನೆಗಳು ಕೋಮು ಸಾಮರಸ್ಯ ಕದಡಲು ಪ್ರಯತ್ನಿಸಿದ್ದು, ಇದಕ್ಕೆ ಮೂಲ ಕಾರಣರಾದವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕೋಮು ಸಾಮರಸ್ಯ ಕದಡಲು ನಿರಂತರ ಪ್ರಯತ್ನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಂಬಂಧಿಸಿದ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೇಸ್ ಹಾಕಿದರೆ ಉಪಯೋಗವಿಲ್ಲ. ಇದಕ್ಕೆ ಮೂಲ ಪ್ರಚೋದನೆ ನೀಡುವ ಮುಖಂಡರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

* ಘರ್ಷಣೆ ಅಪಾಯವಿತ್ತು: ದಿಗಂತ್ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದವರು ಕೇವಲ ನಾಪತ್ತೆ ಬಗ್ಗೆಯೇ ಮಾತನಾಡಿದ್ದರೆ ಅದು ಆದರ್ಶ ರಾಜಕಾರಣವಾಗುತ್ತಿತ್ತು. ಆದರೆ ಇಡೀ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಕೆಲವರು ಪ್ರಯತ್ನಪಟ್ಟಿದ್ದರು. ಇದು ಘರ್ಷಣೆಗೆ ಕಾರಣವಾಗುವ ಅಪಾಯವಿತ್ತು. ಆದರೆ ದಿಗಂತ್‌ನನ್ನು ಪೊಲೀಸರು ಸಕಾಲದಲ್ಲಿ ಪತ್ತೆ ಹಚ್ಚಿ ಸಂಭಾವ್ಯ ಕೋಮು ಘರ್ಷಣೆಯನ್ನು ತಪ್ಪಿಸಿದ್ದಾರೆ. ಇಂಥ ಪ್ರಕರಣಗಳ ಸಂದರ್ಭ ಯಾರು ಏನೇ ಪ್ರಚೋದನೆ ನೀಡಿದರೂ ನೈಜ ಸ್ಥಿತಿಯನ್ನು ಜನತೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ರಮಾನಾಥ ರೈ ಹೇಳಿದರು.

ಚುನಾವಣೆಯಲ್ಲಿ ಸೋಲಿಸುವ ಉದ್ದೇಶದಿಂದ ಈ ಹಿಂದೆ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಅಪಪ್ರಚಾರ ಮಾಡಿದ್ದರು. ಈ ಹತ್ಯೆಯನ್ನು ಮಾಡಿದ್ದು ಯಾರು ಎನ್ನುವುದು ನಂತರ ಬಹಿರಂಗವಾಯಿತು. ಟಿಪ್ಪು ಜಯಂತಿ ದಿನ ಅಮಾಯಕ ಹರೀಶ್ ಪೂಜಾರಿ ಹತ್ಯೆ ಮಾಡಿದ್ದು ಬಿಜೆಪಿ ಕಾರ್ಯಕರ್ತರೇ ಎನ್ನುವುದು ಕೂಡ ಬಯಲಾಗಿದೆ. ಕೋಮು ಘರ್ಷಣೆ ಸೃಷ್ಟಿಸಲು ಯಾರು ಸಾಯ್ತರೆ, ಯಾರು ನಾಪತ್ತೆಯಾಗುತ್ತಾರೆ ಎಂದು ಕಾಯುವಂಥ ರಾಜಕಾರಣ ಜಿಲ್ಲೆಯಲ್ಲಿದೆ. ಸಮಾಜದಲ್ಲಿ ಶಾಂತಿ ಕೆಡಿಸುವ ಕಾರ್ಯಕ್ಕೆ ಯಾರೂ ಮುಂದಾಗಬಾರದು. ಅದಕ್ಕಾಗಿ ಪ್ರಚೋದನೆ ನೀಡುವವರ ಮೇಲೆ ಮೊದಲು ಕಾನೂನು ಕ್ರಮ ಆಗಬೇಕು ಎಂದರು.

ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ಪ್ರಕಾಶ್ ಸಾಲಿಯಾನ್, ಅಬ್ದುಲ್ ಲತೀಫ್, ಅಶೋಕ್ ಡಿ.ಕೆ., ವಿಕಾಸ್ ಶೆಟ್ಟಿ, ಇಬ್ರಾಹಿಂ ನವಾಜ್, ನಝೀರ್ ಬಜಾಲ್ ಮತ್ತಿತರರಿದ್ದರು.

ಕೋಮು ಹತ್ಯೆಗಳ ಎಸ್‌ಐಟಿ ತನಿಖೆಯಾಗಲಿ

ಕರಾವಳಿಯಲ್ಲಿ ಕೋಮು ಸಂಘರ್ಷ ನಿಲ್ಲಬೇಕಾದರೆ ನಿಜವಾದ ಸೂತ್ರಧಾರರಿಗೆ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲ ಕೋಮು ಹತ್ಯೆ ಪ್ರಕರಣಗಳಲ್ಲಿ ಎಸ್‌ಐಟಿ ತನಿಖೆ ನಡೆಸಿ, ಹತ್ಯೆಗಳ ಹಿಂದಿನ ವ್ಯಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ರಮಾನಾಥ ರೈ ಒತ್ತಾಯಿಸಿದರು.