ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರು ನಿಧನರಾಗಿದ್ದಾರೆ. ಮೃತರಿಗೆ 93 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಅವರ ಆರೊಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಅವರನ್ನು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಿಸಿದ್ದರು. ಅರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಶನಿವಾರ ತಡರಾತ್ರಿ ಇಹಲೋಕ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಟವರ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ನ ಮಾಜಿ ಸಂಸದರಾದ ನಟವರ್ ಸಿಂಗ್ ಅವರು ಯುಪಿಎ-1 (2004-05) ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದರು.
ಟವರ್ ಸಿಂಗ್ ಅವರ ನಿಧನದಿಂದ ಬಹಳ ನೋವಾಗಿದೆ. ಅವರು ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯ ಬಹಳ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಸಮೃದ್ಧ ಬರವಣಿಗೆಗೆ ಹೆಸರುವಾಸಿಯಾಗಿದ್ದರು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ 1931ರಲ್ಲಿ ಜನಿಸಿದ ನಟವರ್ ಸಿಂಗ್ ಅವರು ಹಿರಿಯ ರಾಜತಾಂತ್ರಿಕರಾಗಿದ್ದರು. ಅವರು ತಮ್ಮ ರಾಜಕೀಯ ಜೀವನಕ್ಕೆ ರಾಜತಾಂತ್ರಿಕತೆಯ ಅನುಭವ ತಂದರು. ಅವರು ‘ದಿ ಲೆಗಸಿ ಆಫ್ ನೆಹರು: ಎ ಮೆಮೋರಿಯಲ್ ಟ್ರಿಬ್ಯೂಟ್’ ಮತ್ತು ‘ಮೈ ಚೀನಾ ಡೈರಿ 1956-88’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಆತ್ಮಕಥೆಗೆ ‘ಒಂದು ಜೀವನವೇ ಸಾಕಾಗುವುದಿಲ್ಲ’ (ಒನ್ ಲೈಫ್ ಈಸ್ ನಾಟ್ ಎನಫ್) ಎಂದು ಹೆಸರಿಸಲಾಗಿದೆ.