ನ್ಯೂಸ್

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದ್ದೇ ನಮ್ಮಿಂದ, ಅವರು ನಮ್ಮನ್ನೆಲ್ಲ ನೆನಪಿಟ್ಟುಕೊಳ್ಳಬೇಕು: ಸಚಿವ ಬಿ.ಸಿ.ಪಾಟೀಲ್​

ಚಿತ್ರದುರ್ಗ: ಶಾಸಕ ಮಹೇಶ್ ಕುಮಟಳ್ಳಿಯವರು ಕೂಡ ತ್ಯಾಗ ಮಾಡಿ ಬಂದವರು. ಅವರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಸಚಿವ ಬಿ.ಸಿ.ಪಾಟೀಲ್​ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನ ನೀಡಲು ಕಾನೂನು ತೊಡಕಿದೆ. ಅವರಿಗೆಲ್ಲ ಜುಲೈ ವೇಳೆಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಬಗ್ಗೆ ವ್ಯಂಗ್ಯವಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನಮ್ಮಿಂದಲೇ ಅವರಿಗೆ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದ್ದು. ಸರ್ಕಾರದ ಕಾರು, ಬಂಗಲೆ ಇಲ್ಲದೆ ಯಾರೋದ್ದೋ ಹೆಸರಿನ ಬಂಗಲೆಯಲ್ಲಿ ವಾಸವಾಗಿದ್ದರು. ನಮ್ಮನ್ನೆಲ್ಲ ಸಿದ್ದರಾಮಯ್ಯನವರು ನೆನಪಿಸಿಕೊಳ್ಳಬೇಕು. ಅವರಿಗೆ ನಮ್ಮ ಬಗ್ಗೆ ಒಳಗೇ ಪ್ರಿತಿ ಇರುತ್ತದೆ. ವಿಪಕ್ಷ ನಾಯಕನೆಂಬ ಕಾರಣಕ್ಕೆ ಮಾತನಾಡುತ್ತಾರೆ ಎಂದು ಹೇಳಿದರು.

ದೇಶ ವಿರೋಧಿ ಘೋಷಣೆ ಕೂಗಿದರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು. ದೇಶದ ಅನ್ನ, ನೀರು, ಗಾಳಿ ಸೇವಿಸಿ ಬಳಿಕ ಇದೇ ದೇಶದ ವಿರೋಧವಾಗಿ ಘೋಷಣೆ ಕೂಗುವುದು ಸಲ್ಲದು. ಗುಂಡಿಕ್ಕುವ ಕಾನೂನು ತರಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)