ನ್ಯೂಸ್

ಧರ್ಮದ ಹೆಸರಲ್ಲಿ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು: ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಟ್ವೀಟ್​​ ಮೂಲಕ ಸರ್ಕಾರವನ್ನು ಒತ್ತಾಯಿಸಿರುವ ಮಾಜಿ ಸಿಎಂ ಎಚ್​ಡಿಕೆ, ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕೆಂದು ಹೇಳಿದ್ದಾರೆ.

ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ ಎಂದು ಎಚ್​ಡಿಕೆ ಹೇಳಿದ್ದಾರೆ.

ಬಸವಣ್ಣನವರ ವಚನ

ದಯವಿಲ್ಲದ ಧರ್ಮವಾವುದಯ್ಯಾ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

ಈ ಮೇಲಿನ ಬಸವಣ್ಣನವರ ವಚನವನ್ನು ಟ್ವೀಟ್​ ಮಾಡಿರುವ ಎಚ್​ಡಿಕೆ ಗಲಭೆಯನ್ನು ಖಂಡಿಸಿದ್ದಾರೆ.

ಕರಾನ್​ ನೀತಿ ಬೋಧನೆ

"ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಸೌಜನ್ಯದ ಆಜ್ಞೆ ನೀಡುತ್ತಾನೆ. ಮತ್ತು ಅಶ್ಲೀಲಕಾರ್ಯ, ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ." ಎಂಬ ಕುರಾನ್​ನಲ್ಲಿ ಬರುವ ಸಂದೇಶದ ಸಾಲನ್ನು ಟ್ವೀಟ್​ ಮೂಲಕ ನೆನಪಿಸಿರುವ ಎಚ್​ಡಿಕೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.