ನ್ಯೂಸ್

ತನುಜಾ ವೀಕ್ಷಿಸಿದ ಬಿಎಸ್​ವೈ; ನೈಜ ಘಟನೆಯಾಧಾರಿತ ಚಿತ್ರಕ್ಕೆ ಮಾಜಿ ಸಿಎಂ ಮೆಚ್ಚುಗೆ

ಬೆಂಗಳೂರು: ಹರೀಶ್ ಎಂ.ಡಿ. ಹಳ್ಳಿ ನಿರ್ದೇಶನದ ನೈಜ ಘಟನೆಯಾಧಾರಿತ ಸಿನಿಮಾ ತನುಜಾ. ಕಳೆದ ಶುಕ್ರವಾರ (ಫೆ.3) ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೆ ಮಾಜಿ ಸಿಎಂ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, ಬಿ.ವೈ. ವಿಜಯೇಂದ್ರ ಸಿನಿಮಾ ವೀಕ್ಷಿಸಿದರು.

ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳು ತನ್ನದಲ್ಲದ ತಪ್ಪಿಗೆ ನೀಟ್ ಪರೀಕ್ಷೆ ಬರೆಯಲಾಗದೇ ಪರಿತಪಿಸುತ್ತಿರುವ ಸಮಯದಲ್ಲಿ, ಆಡಳಿತ ಯಂತ್ರ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ, ಯಾವ ರೀತಿಯಲ್ಲಿ ನೊಂದವರಿಗೆ ಸಹಾಯ ಮಾಡಬಹದು ಎಂಬುದನ್ನು ಚಿತ್ರದಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮಾಧ್ಯಮಗಳು ಜತೆಗೂಡಿದರೆ ಜನ ಸಾಮಾನ್ಯರಿಗೆ ಸಹಾಯವಾಗುವಂತ ಹಲವಾರು ಕೆಲಸಗಳನ್ನು ಮಾಡಬಹುದು. ನಾನು ಸಿಎಂ ಆಗಿದ್ದಾಗ ನಡೆದ ನೈಜ ಘಟನೆ. ನಾನೂ ಈ ಚಿತ್ರದಲ್ಲಿ ನಟಿಸಿದ್ದೇನೆ. ಈಗ ತನುಜಾ ನೀಟ್ ಪರೀಕ್ಷೆ ಬರೆದು, ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ನಮ್ಮ ಕೆಲಸ ಸಾರ್ಥಕವಾಗಿದೆ ಎಂದು ಭಾವಿಸಿದ್ದೇನೆ, ಎಂದು ಚಿತ್ರದ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಡಾ. ಅಶ್ವತ್ಥನಾರಾಯಣ, ಶಿಕ್ಷಣದ ಮಹತ್ವ ಸಾರುವ ಸಿನಿಮಾ. ಈ ಚಿತ್ರದ ಮೂಲಕ ಚಿತ್ರತಂಡ ಸಾಮಾಜಿಕ ಕಳಕಳಿ ತೋರಿದೆ. ಕನಸನ್ನು ನನಸು ಮಾಡಿಕೊಳ್ಳುವ ಹುಡುಗಿಯ ಪ್ರೇರಣಾದಾಯಕ ಕಥೆ. ಇಂತಹ ಚಿತ್ರಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ, ಎಂದರು. ಬಿ.ವೈ. ವಿಜಯೇಂದ್ರ, ಇದು ಬದುಕಿಗೆ ಹತ್ತಿರವಾದ ನೈಜ ಘಟನೆಯಾಧಾರಿತ ಚಿತ್ರ. ಮನಸ್ಸಿದ್ದರೆ ಮಾರ್ಗ ಎಂಬ ಸಂದೇಶ ನೀಡುತ್ತದೆ. ಶಾಲೆ, ಕಾಲೇಜು ಮಕ್ಕಳು ನೋಡಲೇಬೇಕಾದ ಸಿನಿಮಾ, ಎಂದರು. ಚಿತ್ರದಲ್ಲಿ ಸಪ್ತಾ ಪಾವೂರ್ ತನುಜಾ ಪಾತ್ರದಲ್ಲಿ ನಟಿಸಿದ್ದು, ರಾಜೇಶ್ ನಟರಂಗ, ಸಂಧ್ಯಾ ಅರಕೆರೆ, ಚಿತ್ಕಲಾ ಬಿರಾದಾರ್, ಕೈಲಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ.