ಬಂಗಾರಪ್ಪ ಜನ್ಮದಿನದ ಅಂಗವಾಗಿ ಸ್ನೇಹಮಯಿ ಸಂಘದಿಂದ ಡಾ.ತಿಮ್ಮಪ್ಪ, ಡಾ.ವಿರುಪಾಕ್ಷಪ್ಪ ಹಾಗೂ ಡಾ.ಸಿದ್ದನಗೌಡ ಪಾಟೀಲ್ ಅವರನ್ನು ಗೌರವಿಸಲಾಯಿತು. ಎಸ್.ಚಿನ್ನಪ್ಪ, ಆರ್.ಪ್ರಸನ್ನಕುಮಾರ್, ಜಿ.ವಿಜಯಕುಮಾರ್, ಕಲಗೋಡು ರತ್ನಾಕರ್ ಇತರರಿದ್ದರು. 
ನ್ಯೂಸ್

ಮಾಜಿ ಸಿಎಂ ಬಂಗಾರಪ್ಪ ಬಡವರ ಆಶಾಕಿರಣ

ಶಿವಮೊಗ್ಗ: ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ದೀನದಲಿತರಿಗೆ, ಬಡವರಿಗೆ ಆಶಾಕಿರಣವಾಗಿ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಸ್ನೇಹಮಯಿ ಸಂಘದ ಅಧ್ಯಕ್ಷ ಎಸ್.ಚಿನ್ನಪ್ಪ ಹೇಳಿದರು.

ಬಂಗಾರಪ್ಪ ಜನ್ಮದಿನದ ಅಂಗವಾಗಿ ಶನಿವಾರ ಮೆಗ್ಗಾನ್ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಗಾರಪ್ಪ ಕೊಡುಗೆ ಹಿರಿದು ಎಂದರು.

ಇದುವರೆಗೂ ಸ್ನೇಹಮಯಿ ಸಂಘದಿಂದ ಬಂಗಾರಪ್ಪ ಜನ್ಮದಿನದ ಅಂಗವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿತ್ತು. ಸಾಧಕರನ್ನು ಸನ್ಮಾನಿಸಲಾಗಿದೆ. ಈ ಬಾರಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯರನ್ನು ಗೌರವಿಸಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಶ್ಯಾಮಸುಂದರ್ ಇತರರಿದ್ದರು. ಕಾರ್ಯಕ್ರಮದಲ್ಲಿ ಸಿಮ್ಸ್ ಅಧೀಕ್ಷಕ ಡಾ.ತಿಮ್ಮಪ್ಪ, ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಹಾಗೂ ನಿರ್ದೇಶಕ ವಿರುಪಾಕ್ಷಪ್ಪ ಅವರನ್ನು ಗೌರವಿಸಲಾಯಿತು.