ನ್ಯೂಸ್

ಎಸ್‌ಇಪಿ ರಚನೆ: ಪ್ರೊ.ಥೋರಟ್ ಸಮಿತಿ ಕರ್ನಾಟಕದ 138 ವರ್ಷದ ಪದವಿ ಶಿಕ್ಷಣ ವಿಮರ್ಶಿಸಿದ್ದು ಏಕೆ?

ಬೆಂಗಳೂರು ರಾಜ್ಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದ 4 ದಿನಗಳ ಸಭೆಯು ಮಂಗಳವಾರದಿಂದ ಆರಂಭವಾಗಿದ್ದು, ಮೊದಲ ದಿನದ ಸಭೆಯಲ್ಲಿ ರಾಜ್ಯದಲ್ಲಿ 1882ರಿಂದ 2020ರ ವರೆಗೆ ನಡೆದು ಬಂದಿರುವ ಉನ್ನತ ಶಿಕ್ಷಣ, ಪದವಿ ಕುರಿತ ಮಾಹಿತಿಯನ್ನು ವಿಮರ್ಶೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೊದಲ ದಿನದ ಸಭೆಯು ಎಸ್‌ಇಪಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಪರಿಷತ್ತು ಕಚೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಈ 138 ವರ್ಷಗಳ ಅವಧಿಯಲ್ಲಿ ಯಾವ ರೀತಿಯಲ್ಲಿ ಶಿಕ್ಷಣವಿತ್ತು ಎಂಬುದನ್ನು ಚರ್ಚಿಸಲಾಗಿದೆ.

ಕಲಾ ಮತ್ತು ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವಿಜ್ಞಾನ ವಿಷಯಗಳ ಕೋರ್ಸ್‌ಗಳನ್ನು ಕುರಿತು ಸದಸ್ಯರಾದ ಪ್ರೊ. ಎಸ್. ಾಟ್, ರಾಜೇಂದ್ರ ಚೆನ್ನಿ ಮತ್ತು ಪ್ರೊ. ಶರತ್ ಅನಂತಮೂರ್ತಿ ಅವರು ವಿಷಯಗಳನ್ನು ಸಭೆಯಲ್ಲಿ ಮಂಡನೆ ಮಾಡಿದ್ದಾರೆ.

ಸಮಿತಿ ಸದಸ್ಯರಿಗೆ ಎಸ್‌ಇಪಿ ಅನುಷ್ಠಾನ ಕುರಿತ ಸುಧೀರ್ಘವಾದ ವಿವರಣೆಗಳನ್ನು ಅಧ್ಯಕ್ಷರು ವಿವರಿಸಿದ್ದಾರೆ.

ಪ್ರಮುಖವಾಗಿ ಸಭೆಯಲ್ಲಿ ಅಂತಾರಾಷ್ಟ್ರೀಯ ಶಿಕ್ಷಣದಲ್ಲಿ ಯಾವ ರೀತಿಯಲ್ಲಿ ಉನ್ನತ ಶಿಕ್ಷಣದ ಸಂರಚನೆ ಇದೆ ಹಾಗೂ ಪದವಿಯನ್ನು ಯಾವ ಆಧಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಅದಕ್ಕೆ ಇರುವ ಮಾನದಂಡಗಳೇನು? ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಬಹು ಆಯ್ಕೆ ಪ್ರವೇಶ ಮತ್ತು ನಿರ್ಗಮನ ಕುರಿತ ಅಂಶಗಳನ್ನು ಕುರಿತು ಸದಸ್ಯರಾದ ಪ್ರೊ. ಸುದಾಂಶು ಭೂಷಣ್ ಸಭೆಗೆ ಮಾಹಿತಿಗಳನ್ನು ವಿವರಿಸಿದರು ಎಂದು ತಿಳಿದು ಬಂದಿದೆ.

ಏನೆಲ್ಲ ವಿಷಯಗಳು ಚರ್ಚೆ:

ಬುಧವಾರದ ಸಭೆಯಲ್ಲಿ ಶಿಕ್ಷಣ ಕ್ಷೇತ್ರದ ತಜ್ಞರು, ಪಾಲುದಾರರು ಮತ್ತು ವಿವಿಧ ಶಿಕ್ಷಣ ಮಂಡಳಿಗಳೊಂದಿಗೆ ಸಭೆ ನಡೆಯಲಿದೆ. ಪಠ್ಯಕ್ರಮ ಚೌಕಟ್ಟು, ಕೇಂದ್ರೀಕೃತ ದಾಖಲಾತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುತ್ತದೆ. ವಿಶ್ರಾಂತ ಕುಲಪತಿಗಳ ವೇದಿಕೆಯೊಂದಿಗೂ ಚರ್ಚೆ ನಡೆಯಲಿದೆ. ವಿಶ್ರಾಂತ ಕುಲಪತಿಗಳು ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಸಲಹೆಗಳನ್ನು ನೀಡಲಿದ್ದಾರೆ. ಗುರುವಾರದ ಸಭೆಯಲ್ಲಿ ಎನ್‌ಇಪಿ ಕರಡು ವರದಿ ಸಲ್ಲಿಕೆಗೆ ಬೇಕಾದ ಅಂಶಗಳನ್ನು ಚರ್ಚಿಸಲಾಗುತ್ತದೆ.

ಜ.17,18ರಂದು ವರದಿ ಸಾಧ್ಯತೆ

ಎಸ್‌ಇಪಿಯಲ್ಲಿ ಎನ್‌ಇಪಿಗೆ ಸಂಬಂಧಿಸಿದ ಅಂಶಗಳು ಮತ್ತು ಯಾವೆಲ್ಲ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ ಮತ್ತು ಕೈ ಬಿಡಲಾಗಿದೆ ಎಂಬ ವರದಿಯನ್ನು ಇದೇ ತಿಂಗಳ 17 ಅಥವಾ 18ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಗಳಿವೆ.