ನ್ಯೂಸ್

3 ವಿಧೇಯಕ ಪರಾಮರ್ಶೆಗೆ ಕಾನೂನು ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ

ಬೆಂಗಳೂರು: ಭಾರತೀಯ ನ್ಯಾಯ ಸಂಹಿತೆ 2013, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ವಿಧೇಯಕ 2023ಗಳನ್ನು ಸಮಗ್ರವಾಗಿ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ತಜ್ಞರ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಮೂರು ಹೊಸ ವಿಧೇಯಕ ಪರಿಚಯಿಸಿದ್ದು, ಈ ವಿಧೇಯಕಗಳ ಬದಲಾವಣೆಗಳ ಅವಶ್ಯಕತೆ ಇದ್ದಲ್ಲಿ ರಾಜ್ಯದ ಅವಶ್ಯಕ ಸಲಹೆ / ಸೂಚನೆಗಳನ್ನು ನೀಡುವಂತೆ ಕೋರಿದೆ. ಈ ವಿಷಯವಾಗಿ ಒಂದು ತಜ್ಞರ ಸಮಿತಿಯನ್ನು ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ರಚಿಸಿ ಈ ಸಂಬಂಧ ಎಲ್ಲ ಆಕ್ಟ್ ಅಂಡ್ ರೂಲ್ಸ್‌ನ್ನು ಪರಿಶೀಲಿಸಿ 20 ದಿನದ ಒಳಗಾಗಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಸಮಿತಿ ರಚನೆ ಮಾಡಲಾಗಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷರಾಗಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ, ಕಾನೂನು ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಎಂ.ಹಿರೇಮಠ, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಜಿ.ಶ್ರೀಧರ್, ಕಾನೂನು ಇಲಾಖೆ ಸರ್ಕಾರದ ವಿಶೇಷ ಕಾರ್ಯದರ್ಶಿ ಎಚ್.ಕೆ.ಜಗದೀಶ್, ಕಾನೂನು ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಬಿ.ಎಂ.ಶೈಲಾ, ನಿವೃತ್ತ ಪ್ರಾಧ್ಯಾಪಕ ಚಿದಾನಂದ ಪಾಟೀಲ, ವಕೀಲ ಶಶಿಕಾಂತ ಕರೋಶಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎನ್.ಎಸ್.ಮೇಘರಿಕ್, ನ್ಯಾಷನಲ್ ಲಾ ಸ್ಕೂಲ್ ಆ್ ಇಂಡಿಯಾ ಯೂನಿವರ್ಸಿಟಿ ಪ್ರಾಧ್ಯಾಪಕ ಪ್ರೊ.ಎಸ್.ವಿ.ಜೋಗಾರಾವ್, ಕಾನೂನು ಇಲಾಖೆ ನಿವೃತ್ತ ಅಪರ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.