ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಅಕ್ರಮಗಳಿಂದ ಪಾರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಆಯೋಗ ರಚಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ರಚಿಸಿದ ದೇಸಾಯಿ ಆಯೋಗಕ್ಕೆ ನನ್ನ ಬಳಿ ಇರುವ ದಾಖಲೆಗಳನ್ನು ನೀಡಿ ನೆಕ್ಕಿಕೊಳ್ಳಬೇಕಾ? ದೇಸಾಯಿ ಆಯೋಗಕ್ಕೆ ದಾಖಲೆಗಳನ್ನು ನೀಡಲು ಬಯಸುವುದಿಲ್ಲ. ಹಗರಣದ ಬಗ್ಗೆ ಕಾನೂನು ಹೋರಾಟ ನಡೆಸುವುದು ಸೂಕ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ಈ ಸರ್ಕಾರ ಒಂದು ಘಳಿಗೆ ಅಧಿಕಾರದಲ್ಲಿ ಇರಬಾರದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮುಡಾದಲ್ಲಿ ಕೈಗಾರಿಕಾ ನಿವೇಶನ ನೀಡುವಂತೆ ಕೋರಿ 40 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ಇದುವರೆಗೂ ನನಗೆ ನಿವೇಶನ ಸಿಕ್ಕಿಲ್ಲ. ನನಗೆ ನಿವೇಶನ ನೀಡದಿದ್ದರೂ ಇಷ್ಟೊಂದು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಿವೇಶನ ನೀಡಿದ್ದರೆ ಗತಿ ಏನು? ದೇವರು ನನ್ನನ್ನು ಕಾಪಾಡುತ್ತಾನೆ. ನನಗೆ ಮಂಜೂರಾದ ಕೈಗಾರಿಕಾ ನಿವೇಶನ ಹಾಗೂ ಜೆಡಿಎಸ್ ನಾಯಕರ ನಿವೇಶನಗಳ ವಿಚಾರವನ್ನು ಮುಂದಿಟ್ಟು ಕೊಂಡು ಮುಡಾ ಹಗರಣದಿಂದ ಪಾರಾಗಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿವೇಶನದಲ್ಲಿ ಉತ್ತರ ನೀಡಲು ಆಗದೆ ಸಿದ್ದರಾಮಯ್ಯ ಕದ್ದು ಓಡಿ ಬಂದಿದ್ದಾರೆ. ‘ನನ್ನ ಜೀವನ ಪಾರದರ್ಶಕವಾಗಿದ್ದು, ಒಂದು ಕಪ್ಪು ಚುಕ್ಕೆ ಸಹ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆರ್ಕಾವತಿ ಡಿ ನೋಟಿಫಿಕೇಷನ್ ಹಗರಣದ ಕುರಿತು ತನಿಖೆ ನಡೆಸಿ ವರದಿ ನೀಡಿದ ಕೆಂಪಣ್ಣ ಆಯೋಗದ ವರದಿಯನ್ನು ಸರ್ಕಾರ ಏತಕ್ಕೆ ಬಹಿರಂಗ ಪಡಿಸುತ್ತಿಲ್ಲ? ಬಹಿರಂಗ ಪಡಿಸಿದರೆ ಇವರ ಬಂಡವಾಳ ಗೊತ್ತಾಗುತ್ತದೆ. ‘ನನ್ನ ಜೀವನ ತೆರೆದ ಪುಸ್ತಕ’ ಅನ್ನುವ ಸಿದ್ದರಾಮಯ್ಯ ಒಂದು ಬಾರಿ ಕೆಂಪಣ್ಣ ವರದಿ ತೆರೆಯುವ ಪ್ರಯತ್ನ ಮಾಡಲಿ. ಮುಡಾ ಹಗರಣ ಮುಚ್ಚಿ ಹಾಕಲು ಸದನದ ಕಲಾಪವನ್ನು ಸಹ ಜಾಹೀರಾತು ನೀಡುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ ಕುಮಾರ್ ಇದ್ದರು.