ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಾರಂಭಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲಾ ವಜ್ರ ಮಹೋತ್ಸವವನ್ನು ಆಚರಣೆ ಮಾಡುವ ಕುರಿತು ಮಂಗಳವಾರ ಶಾಲಾ ಸಭಾಂಗಣದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೇಮಾನಂದ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನಿವೃತ್ತ ಪ್ರಾಂಶುಪಾಲ ಮಾದಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ್ತ ಹುದ್ದೆ ಅಲಂಕರಿಸಿರುವ ಜತೆಯಲ್ಲಿ ಸಮಾಜದಲ್ಲಿ ಗಣ್ಯ ವ್ಯಕಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಹಿಂದೆ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯನ್ನು ಪಾಠ ಮಾಡಿದ ಗುರುಗಳನ್ನು ಹಳೆಯ ವಿದ್ಯಾರ್ಥಿಗಳು ಸ್ಮರಿಸಬೇಕಿದೆ. ಈ ಮೂಲಕ ಶಾಲೆಗೆ ಮತ್ತು ಪಾಠ ಮಾಡಿದ ಗುರುಗಳಿಗೆ ಋಣ ತೀರಿಸಬೇಂಕೆಂದು ಕಿವಿಮಾತು ಹೇಳಿದರು.
ವಜ್ರ ಮಹೋತ್ಸವವನ್ನು ಮೂರು ದಿನದವರೆಗೆ ಆಚರಿಸುವುದು, ಸದರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಒಗ್ಗೂಡಿಸುವುದು. ಇದೇ ಶಾಲೆಯಲ್ಲಿ ಹಿಂದೆ ಪಾಠ ಮಾಡಿದ ನಿವೃತ್ತ ಶಿಕ್ಷಕರನ್ನು ಗುರುತಿಸಿ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸುವುದು, ಶಾಲೆಯಲ್ಲಿ ಓದಿ ಈಗ ಸರ್ಕಾರಿ, ಖಾಸಗಿ ವಲಯದಲ್ಲಿ ಉನ್ನತ್ತ ಹುದ್ದೆಯಲ್ಲಿರುವ ನಿವೃತ್ತ ಮತ್ತು ಹಾಲಿ ಅಧಿಕಾರಿಗಳನ್ನು ಗುರುತಿಸುವುದು. ಕ್ರೀಡಾ, ಕೃಷಿ, ಶಿಕ್ಷಣ, ರಕ್ಷಣಾ, ಆರೋಗ್ಯ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇದೇ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸುವುದು ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಅಂದಾಜು 20 ಲಕ್ಷ ರೂ. ಬೇಕಾಗುವುದರಿಂದ ಮೊದಲು ಹಣದ ಕ್ರೋಢೀಕರಣದ ಅಗತ್ಯ ಇರುವುದರಿಂದ ಈ ಕುರಿತಾಗಿ ಪೂರ್ವಭಾವಿ ಸಭೆಯಲ್ಲಿ ವಜ್ರ ಮಹೋತ್ಸವ ಮತ್ತು ಆರ್ಥಿಕ ಸಮಿತಿಯನ್ನು ರಚಿಸಲಾಯಿತು. ವಜ್ರ ಮಹೋತ್ಸವ ಸಮಿತಿಗೆ 19 ಹಾಗೂ ಆರ್ಥಿಕ ಸಮಿತಿಗೆ 15 ಸದಸ್ಯರು ಒಳಗೊಂಡಂತೆ 2 ಸಮಿತಿಗಳನ್ನು ರಚಿಸಲಾಯಿತು. ಮುಂದಿನ ರೂಪುರೇಷೆಗಳ ಕುರಿತು ಮುಂದಿನ ಜೂನ್ 17ರಂದು 3ನೇ ಪೂರ್ವಭಾವಿ ಸಭೆಯನ್ನು ಕರೆದು ಅಂದು ನಡೆಯುವ ಸಭೆಯಲ್ಲಿ ಮತ್ತಷ್ಟು ಚರ್ಚೆ ನಡೆಸುಸುವುದು, ಉಪ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಎಚ್.ಎಸ್.ಪ್ರೇಮನಾಥ್, ಎಚ್.ಕೆ.ಶಿವಪ್ರಕಾಶ್ ಸಲಹೆ ನೀಡಿದರು. ಕಾರ್ಯಕ್ರಮ ಸಂಯೋಜಕ, ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ವಜ್ರಮಹೋತ್ಸವ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯಶಿಕ್ಷಕ ಉದಯ್‌ಕುಮಾರ್ ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳಾದ ಕಡ್ಯದ ಮಾಚಯ್ಯ, ಪಿ.ಎಸ್.ಸತೀಶ್‌ಕುಮಾರ್, ಧರ್ಮಪ್ಪ ಹಾಗೂ ಶಾಲಾ ಶಿಕ್ಷಕಿಯರು ಹಾಜರಿದ್ದರು.