ಶಿವಮೊಗ್ಗ: ತುಂಗಾ ನದಿ ಜೀರ್ಣೋದ್ಧಾರ ಹಾಗೂ ಅದನ್ನು ಮತ್ತೆ ಜೀವಂತಗೊಳಿಸುವ ಕುರಿತಂತೆ ಅಧ್ಯಯನಕ್ಕೆ 15 ಜನರ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಸದಸ್ಯರಾಗಿ ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ, ಶಿವಮೊಗ್ಗ ಜಿಪಂ ಸಿಇಒ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು, ಶಿವಮೊಗ್ಗ ಸ್ಮಾರ್ಟ್‌ಸಿಟಿ ಎಂಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಧಾರವಾಡ ವಾಲ್ಮೀ ನಿರ್ದೇಶಕರು, ಬೆಂಗಳೂರಿನ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರದ ನಿಬಂಧಕರು, ಶಿವಮೊಗ್ಗದ ಯುಟಿಪಿ ಮುಖ್ಯ ಇಂಜಿನಿಯರ್ ಅಥವಾ ಇಇ, ಲೋಕೋಪಯೋಗಿ ಇಲಾಖೆ ಇಇ, ಐಐಎಂ ಬೆಂಗಳೂರಿನ ಚೀಫ್ ಆಪರೇಟಿಂಗ್ ಆಫಿಸರ್ ಡಾ. ಆದಿತ್ಯಗುಪ್ತ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಎಚ್.ಎನ್.ಚಾಣಕ್ಯ ಹಾಗೂ ಐಸೆಕ್‌ನ ಡಾ. ಕೃಷ್ಣರಾಜ್ ಅವರನ್ನು ಸಮಿತಿಗೆ ನೇಮಕಗೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ನಟ ಅನಿರುದ್ಧ ಜತಕರ ಅವರು ಇತ್ತೀಚೆಗೆ ಶಿವಮೊಗ್ಗ ತುಂಗಾ ನದಿಯ ಜೀರ್ಣೋದ್ಧಾರಕ್ಕಾಗಿ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದರು. ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲು ಕ್ರಮವಹಿಸುವಂತೆ ಬೆಂಗಳೂರಿನ ಜಲಸಂಪನ್ಮೂಲ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಎಂ ಸೂಚಿಸಿದ್ದರು.
ರಾಜ್ಯ ಸರ್ಕಾರವು ಕಾವೇರಿ ನದಿಗೆ ಕಲುಷಿತ ನೀರು ಸೇರ್ಪಡೆ ಕುರಿತಂತೆ ಪರಿಹಾರ ಸೂಚಿಸಲು ನಾನಾ ಇಲಾಖೆಗಳ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಿದ್ದು, ಅದೇ ಮಾದರಿಯಲ್ಲಿ ತುಂಗಾ ನದಿ ಕಲುಷಿತಗೊಳ್ಳುತ್ತಿರುವ ಕುರಿತ ಅಧ್ಯಯನ ನಡೆಸಲು ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಸಮಿತಿ ರಚಿಸಬಹುದೆಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ತುಂಗಾ ನದಿ ಕಲುಷಿತಗೊಳ್ಳುತ್ತಿರುವ ಕುರಿತು ಸಮಗ್ರವಾಗಿ ಅಧ್ಯಯನದ ಅವಶ್ಯವಿರುವ ಹಿನ್ನೆಲೆಯಲ್ಲಿ ಹಲವು ಇಲಾಖೆಗಳನ್ನೊಳಗೊಂಡು ಸಮಿತಿ ರಚಿಸಿ ಕರ್ನಾಟಕ ನೀರಾವರಿ ನಿಗಮದ ಎಂಡಿ ಆದೇಶ ಹೊರಡಿಸಿದ್ದಾರೆ.