ನ್ಯೂಸ್

ಮೀಸಲಾತಿಗಾಗಿ ಆಗ್ರಹಿಸಿ ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ

ಮಂಜುನಾಥ.ಕೆ

ಬೆಂಗಳೂರು: ಅರಣ್ಯ ಇಲಾಖೆಯ ನೇರ ನೇಮಕಾತಿಯಲ್ಲಿ ಅರಣ್ಯಶಾಸ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಲು ಒತ್ತಾಯಿಸಿ ಕರ್ನಾಟಕ ಅರಣ್ಯಶಾಸ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ವತಿಯಿಂದ ಪ್ರೀಢಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಎಚ್.ಕೆ.ಚೇತನ್ ಗೌಡ ಮಾತನಾಡಿ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯಶಾಸ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಲು ಒತ್ತಾಯಿಸಿ ರಾಜ್ಯದ ಮೂರು ಅರಣ್ಯ ಮಹಾವಿದ್ಯಾಲಯಗಳಾದ ಪೊನ್ನಂಪೇಟೆರ, ಶಿರಸಿ ಮತ್ತು ಇರುವಕ್ಕಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರವು ೨೦೦೩ ರಲ್ಲಿ ಅರಣ್ಯಶಾಸ ಪದವೀಧರರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ.೫೦ ರಷ್ಟು ಮೀಸಲಾತಿ ನೀಡುವ ಮೂಲಕ ಅವರ ಪ್ರಾವೀಣ್ಯತೆಯನ್ನು ಗುರುತಿಸಿ ಗೌರವಿಸಿತ್ತು. ಅರಣ್ಯ ಪದವೀಧರರ ಗುಣಮಟ್ಟವನ್ನು ಮನಗಂಡ ಸರ್ಕಾರವು ವಲಯ ಅರಣ್ಯಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅರಣ್ಯಶಾಸ ಪದವೀಧರರಿಗೆ ಮೀಸಲಾತಿಯನ್ನು ಶೇ.೫೦ ರಿಂದ ಶೇ.೭೫ ಕ್ಕೆ ಹೆಚ್ಚಿಸಿ ಮತ್ತು ಉಪವಲಯ ಅರಣ್ಯಾಧಿಕಾರಿಗಳ ನೇರ ನೇಮಕಾತಿಯಲ್ಲಿ ಶೇ.೫೦ ಮೀಸಲಾತಿಯನ್ನು ಒದಗಿಸುವುದರ ಮೂಲಕ ಕರ್ನಾಟಕ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತಂದಿತು. ೨೦೧೮ ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅರಣ್ಯ ಪದವೀಧರರಿಗೆ ಇದ್ದ ಶೇ.೭೫ ಮೀಸಲಾತಿಯನ್ನು ಕಡಿತಗೊಳಿಸಿ ಶೇ.೫೦ ಕ್ಕೆ ಇಳಿಸಲಾಯಿತು. ಇದು ಮಹತ್ವಾಕಾಂಕ್ಷಿ ಅರಣ್ಯ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಅರಣ್ಯ ಪದವೀಧರರ ಸಮಗ್ರ ತರಬೇತಿ ಮತ್ತು ಸಮರ್ಪಣೆಯ ಹೊರತಾಗಿಯೂ ಕೂಡ ಅರಣ್ಯ ಇಲಾಖೆಯಲ್ಲಿ ಉದ್ಯೋಗವಕಾಶಗಳನ್ನು ಪಡೆಯುವಲ್ಲಿ ಹಿನ್ನೆಡೆಯನ್ನು ಎದುರಿಸುತ್ತಿರುವುದು ವಿಷಾದನೀಯ ಸಂಗತಿ. ೨೦೧೮ ರಲ್ಲಿ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ಕೊನೆಯ ನೇರ ನೇಮಕಾತಿ ಮಾಡಿಲಾಗಿದ್ದು, ಅಂದಿನಿಂದ ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಲವಾರು ಅರಣ್ಯ ವಿದ್ಯಾರ್ಥಿಗಳ ಭರವಸೆ ಮತ್ತು ಕನಸುಗಳನ್ನು ಛಿದ್ರಗೊಳಿಸಿದೆ ಎಂದು ನುಡಿದರು.
ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ರಕ್ಷಣೆಯನ್ನು ಉತ್ತೇಜಿಸಲು ಅರಣ್ಯ ವಿದ್ಯಾರ್ಥಿಗಳ ಸೇರ್ಪಡೆ ಅತ್ಯಗತ್ಯವಾಗಿದ್ದು, ಅರಣ್ಯ ಪದವೀಧರರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.