ಶಿವಮೊಗ್ಗ: ದೇಶಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡುವ ಸೈನಿಕರಿಗೆ ಸಿಗುವಷ್ಟೇ ಗೌರವ ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಸಿಬ್ಬಂದಿ ಹುತಾತ್ಮರಾದಾಗಲೂ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ಶ್ರೀಗಂಧ ಕೋಠಿಯಲ್ಲಿ ಸೋಮವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ಸಿಬ್ಬಂದಿ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿ, ದೇಶ ರಕ್ಷಿಸುವ ಸೈನಿಕ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸ್ ಸಿಬ್ಬಂದಿ, ಅರಣ್ಯ ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ಸ್ಮರಣೀಯ ಎಂದರು.
ದೇಶ ಹಾಗೂ ದೇಶದ ಸಂಪತ್ತು ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಜೀವವೂ ಅಮೂಲ್ಯ. ಅವರು ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸುವಂತಾಗಬೇಕು. ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರವಲ್ಲ ಮನುಷ್ಯನೂ ಕಾರಣನಾಗಿರುವುದು ಬೇಸರ ಸಂಗತಿಯಾಗಿದೆ. ಅನೇಕ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಭಾರಿ ಪ್ರಮಾಣದಲ್ಲಿ ಕಾಡನ್ನು ನಾಶಗೊಳಿಸಿ, ಕೃತಕವಾಗಿ ಮರಗಳನ್ನು ನೆಡುವುದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಿಸಿದಂತಾಗುತ್ತದೆ ಎಂಬುದು ತಪ್ಪು ಕಲ್ಪನೆ. ಅರಣ್ಯವನ್ನು ಅದು ಇರುವಂತಹ ರೀತಿಯಲ್ಲಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಅರಣ್ಯವನ್ನು ರಾಷ್ಟ್ರೀಯ ಸಂಪತ್ತು ಎಂದು ಭಾವಿಸಿ ಅದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅರಣ್ಯದ ಮಹತ್ವದ ಕುರಿತು ಎಲ್ಲರಲ್ಲೂ ಅರಿವು ಮೂಡಬೇಕು. ಅರಣ್ಯ ರಕ್ಷಕರು ಬಹುತೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ನಾಶಕ್ಕೆ ಕಾರಣರಾಗಿರುವ ಕೆಲವು ಮಂದಿ ದುರಾಸೆ ಬಿಟ್ಟು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು.
ಸಿಸಿಎಫ್ ಡಾ. ಕೆ.ಟಿ.ಹನುಮಂತಪ್ಪ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆ ಭೂಮಿ, ಅರಣ್ಯ ಮತ್ತು ಪ್ರಾಣಿಸಂಕುಲದ ನಾಶಕ್ಕೆ ಕಾರಣವಾಗುತ್ತಿದೆ. ಎಲ್ಲರೂ ಅರಣ್ಯ ರಕ್ಷಣೆಗೆ ಮುಂದಾಗಬೇಕು. ಅರಣ್ಯ ರಕ್ಷಕರೂ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕೆಂದರು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇತರರಿದ್ದರು.