ಹನೂರು: ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು 5 ದಿನಗಳವರೆಗೆ ವಿಚಾರಣೆಗಾಗಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು ಅಲಿಯಾಸ್ ಸಣ್ಣ (33), ಗಣೇಶ್ (42), ಕಾಂಚಳ್ಳಿ ಗ್ರಾಮದ ಸಂಪಿಗೆ ಮಾದೇವ ಆಲಿಯಾಸ್ ಸಂಪು (29) ಹಾಗೂ ಗೋವಿಂದರಾಜು (55) ಎಂಬುವರನ್ನು ಶನಿವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು. ಭಾನುವಾರ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ರಾತ್ರಿ 11ರ ವೇಳೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಚಾರಣೆಯ ಕಾಲಾವಕಾಶಕ್ಕಾಗಿ ನಾಲ್ವರು ಆರೋಪಿಗಳನ್ನು ಕೊಳ್ಳೇಗಾಲದ ನ್ಯಾಯಾಧೀಶರ ನಿವಾಸಕ್ಕೆ ಕರೆತಂದಿದ್ದರು. ನ್ಯಾಯಾಧೀಶರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದರು.
ರಾತ್ರಿ ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಪ್ರಕರಣದಲ್ಲಿ ಗೋವಿಂದರಾಜು ಎಂಬಾತನ ಪಾತ್ರವಿಲ್ಲ ಎಂಬುದನ್ನು ಅರಿತು ಆತನನ್ನು ಬಿಡುಗಡೆಗೊಳಿಸಿ ಪಚ್ಚಮಲ್ಲು, ಗಣೇಶ ಹಾಗೂ ಸಂಪು ಈ ಮೂವರನ್ನು ವಿಚಾರಣೆಯ ಕಾಲಾವಕಾಶದ ಅನುಮತಿಗಾಗಿ ಎಸಿಎಫ್ ವಿರಾಜ್ ಹೊಸೂರ್, ಆರ್‌ಎಫ್‌ಒಗಳಾದ ನಾಗರಾಜು ಹಾಗೂ ಉಮಾಪತಿ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಾವ್ಯಶ್ರೀ ಅವರು ಅ.10 ರವರೆಗೆ ಆರೋಪಿಗಳನ್ನು ವಶದಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಿ ಮಧ್ಯಾಹ್ನ 3 ಗಂಟೆಗೆ ಕೊಳ್ಳೇಗಾಲದ ನ್ಯಾಯಾಲಯಕ್ಕೆ ಹಾಜರುಪಡಿಸಿವಂತೆ ಸೂಚಿಸಿದರು. ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆಯನ್ನು ಆರಂಭಿಸಿದ್ದಾರೆ.