ಶಿವಮೊಗ್ಗ ಜಿಲ್ಲೆಯಲ್ಲಿ 1978ರ ಪೂರ್ವದಲ್ಲಿ ಅರಣ್ಯ ಜಾಗದಲ್ಲಿ ಉಳುಮೆ ಮಾಡಿದ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ತೀ.ನ.ಶ್ರೀನಿವಾಸ್, ಸೋಮಶೇಖರಪ್ಪ, ಪರಶೂರಾಮ್, ಕೊಟ್ರೇಶ್, ಹುಲ್ಲಿಕತ್ತಿ ಮಲ್ಲಪ್ಪ ಮುಂತಾದವರಿದ್ದರು. 
ನ್ಯೂಸ್

ಅರಣ್ಯ ಸಚಿವರಿಗೆ ರೈತರ ಸಮಸ್ಯೆಗಳ ಅರಿವಿಲ್ಲ

ಶಿವಮೊಗ್ಗ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಲೆನಾಡಿನ ರೈತರ ಸಮಸ್ಯೆಗಳು, ಅರಣ್ಯ ಕಾನೂನುಗಳ ಬಗ್ಗೆ ಜ್ಞಾನವಿಲ್ಲದೆ ದಿನಕ್ಕೊಂದು ರೈತ ವಿರೋಧಿ ಆದೇಶಗಳನ್ನು ಹೊರಡಿಸುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

1978ರ ಪೂರ್ವದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಭೂಮಿಗೆ ಹಕ್ಕುಪತ್ರ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಹಕ್ಕುಪತ್ರ ನೀಡುತ್ತಿಲ್ಲ. ಅರಣ್ಯ ಸಚಿವರು ಕಾನೂನಿನ ಬಗ್ಗೆ ಅತಿಹೆಚ್ಚು ತಿಳಿದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಶಿಕಾರಿಪುರ ತಾಲೂಕು ಉಡುಗಣಿ ಹಾಗೂ ಗಾಂಧಿನಗರ ಭಾಗದಲ್ಲಿ 1978ರ ಪೂರ್ವದಿಂದಲೂ ಉಳುಮೆ ಮಾಡುತ್ತಿರುವ ಭೂಮಿಯಿದೆ. ಶಿಕಾರಿಪುರ ಹಾಗೂ ಸೊರಬ ತಾಲೂಕು ಸೇರಿ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರಾದ ಪರಶುರಾಮ್ ಮತ್ತು ಸೋಮಶೇಖರ್ ಮಾತನಾಡಿ, ಶಿಕಾರಿಪುರ ತಾಲೂಕಿನ ಗಾಂಧಿನಗರ ಮತ್ತು ಉಡುಗಣಿ ಗ್ರಾಮದ 150ಕ್ಕೂ ಹೆಚ್ಚು ರೈತರು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮುನ್ನ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡಿಕೊಂಡಿದ್ದರು. ಕೈ ಬರಹದ ಪಹಣಿ ಮತ್ತು ದಂಡ ಕಟ್ಟಿದ ರಸೀದಿ ಅವರ ಬಳಿ ಇದೆ. ಜಮೀನು ಮಂಜೂರಾತಿ ಮಾಡುವಂತೆ ಅರಣ್ಯ ಇಲಾಖೆ ಶಿಫಾರಸು ಮಾಡಿ 29 ವರ್ಷ ಕಳೆದರೂ ಮಂಜೂರಾತಿ ಮಾಡದೆ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ದೂರಿದರು.

ಪ್ರಮುಖರಾದ ಕೊಟ್ರೇಶ್, ಲಕ್ಷ್ಮಣಪ್ಪ, ನಹೀಂ ಪಾಷಾ, ದುಂಡಪ್ಪ, ಹುಲ್ಲಿಕತ್ತಿ ಮಲ್ಲಪ್ಪ, ರೇವಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು. ಬಳಿಕ ರೈತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.