ನ್ಯೂಸ್

ಕೆಐಒಸಿಎಲ್ ತಪ್ಪೆಸಗಿದ್ದರಿಂದ ಅರಣ್ಯ ಜಮೀನು ಹಸ್ತಾಂತರಕ್ಕೆ ತಡೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ (ಕೆಐಒಸಿಎಲ್) ತನ್ನ ತಪ್ಪುಗಳನ್ನು ತಿದ್ದಿಕೊಂಡರೆ ಗಣಿಗಾರಿಕೆಗೆ ಅನುಮತಿ ಪಡೆಯಲು ಅವಕಾಶವಿದೆ ಎಂದ ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಕೇಂದ್ರೀಯ ಉನ್ನಾತಾಧಿಕಾರ ಸಮಿತಿ ನಿರ್ದೇಶನ, ನಿಯಮಗಳನ್ನು ಉಲ್ಲಂಸಿದೆ. ನ್ಯಾಯಾಲಯದ ಆದೇಶವನ್ನೂ ಈ ಸಂಸ್ಥೆ ಪಾಲಿಸಿಲ್ಲ.

ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ತನಕ ಸಂಸ್ಥೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಸ್ವಾಮಿಮಲೈ ಘಟ್ಟ ಪ್ರದೇಶದಲ್ಲಿ ಅರಣ್ಯ ಜಮೀನು ಹಸ್ತಾಂತರಕ್ಕೆ ತಡೆಯೊಡ್ಡಿರುವೆ ಎಂದು ತಮ್ಮ ಕ್ರಮ ಸಮರ್ಥಿಸಿಕೊಂಡರು.

ಸಿ.ಟಿ.ರವಿಗೆ ತಿರುಗೇಟು

ಎಲುಬಿಲ್ಲದ ನಾಲಿಗೆ ಎಂದು ಸಿ.ಟಿ.ರವಿ ಏನೇನೋ ಮಾತನಾಡಿದ್ದಾರೆ. ಸೂಟ್‌ಕೇಸ್ ಕೊಡಲಿ ಎಂದು ನಾವು ತಡೆಯೊಡ್ಡಿಲ್ಲ. ಅಕ್ರಮ ಗಣಿಗಾರಿಕೆ ಮೂಲ ಪಕ್ಷ ಯಾವುದೆಂದು ದೇಶಕ್ಕೆ ಗೊತ್ತು ಎಂದು ತಿರುಗೇಟು ನೀಡಿದರು.

ಚಿಕ್ಕಮಗಳೂರು ಸುತ್ತಮುತ್ತ ಶುಂಠಿ ಬೆಳೆಯುವ ಹೆಸರಿನಲ್ಲಿ ಮರ ಕಡಿಯುವವರ ಮತ್ತು ಅರಣ್ಯ ಒತ್ತುವರಿ ಮಾಡುವವರ ಬೆಂಬಲಕ್ಕೆ ಯಾರು ನಿಂತಿದ್ದಾರೆ ಎಂಬುದು ಗೊತ್ತಿದೆ. ಎಲ್ಲವೂ ಶೀಘ್ರವೇ ಹೊರಬರಲಿದೆ ಎಂದೂ ಈಶ್ವರ ಖಂಡ್ರೆ ಹೇಳಿದರು.