ನ್ಯೂಸ್

ಅರಣ್ಯ ಭೂಮಿ ಮರು ವಶ ವಿಳಂಬ: ಸಚಿವ ಈಶ್ವರ ಖಂಡ್ರೆ ಅಸಮಾಧಾನ

ಬೆಂಗಳೂರು: ಹೈಕೋರ್ಟ್ ಆದೇಶಿಸಿ 15 ವರ್ಷಗಳು ಕಳೆದರೂ ಅರಣ್ಯ ಜಮೀನು ವಶಕ್ಕೆ ಪಡೆದು, ಅಭಿವೃದ್ಧಿಪಡಿಸುವಲ್ಲಿ ವಿಳಂಬ ಮಾಡಿದ ಇಲಾಖೆ ಅಧಿಕಾರಿಗಳ ವಿರುದ್ಧ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮೀನು ವಶ ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ತೋರಿ, ಕರ್ತವ್ಯಲೋಪ ಎಸಗಿದ ಎಪಿಸಿಸಿಎ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, ಕ್ರಮ ಜರುಗಿಸಲು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾವಲು ಪ್ರದೇಶ (ಸ.ನಂ. 1 ರಿಂದ 22)ದ 331 ಎಕರೆ ಜಮೀನು ಅನಧಿಕೃತ ಮಂಜೂರಾತಿ ರದ್ದುಪಡಿಸಿ, ಯಥಾವತ್ ಅರಣ್ಯ ಭೂಮಿಯಾಗಿ ಉಳಿಸಲು ಹೈಕೋರ್ಟ್ ಅಂದಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್, ಮೋಹನ ಶಾಂತನಗೌಡ ಅವರಿದ್ದ ವಿಭಾಗೀಯ ಪೀಠ 2009ರ ನವೆಂಬರ್ 6ರಂದು ತೀರ್ಪು ನೀಡಿದೆ.

ಅನಧಿಕೃತ ಮಂಜೂರಾತಿ ರದ್ದು

ಮಹಾರಾಜರ ಆಳ್ವಿಕೆಯಲ್ಲಿ ಕಗ್ಗಲಿ ಕಾವಲು ಪ್ರದೇಶವನ್ನು 1940ರ ಜ.15ರಂದು ಕಿರು ಅರಣ್ಯ ಪ್ರದೇಶವೆಂದು ೋಷಿಸಲಾಗಿತ್ತು. ನಂತರ ಅನಧಿಕೃತವಾಗಿ ದರಕಾಸ್ತು ಮಂಜೂರಾತಿ ಮಾಡಿದ್ದರ ವಿರುದ್ಧ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ 2000ರಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ಅನಧಿಕೃತ ಮಂಜೂರಾತಿ ರದ್ದು ಮಾಡಿ, 331.07 ಎಕರೆ ಪ್ರದೇಶವನ್ನು ಯಥಾವತ್ ಅರಣ್ಯವಾಗಿ ಉಳಿಸಲು ಆದೇಶಿಸಿತ್ತು. ನಂತರ ಹಾಸನ ಜಿಲ್ಲೆಯ ಕೆಲವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಚನ್ನರಾಯಪಟ್ಟಣ ತಹಸೀಲ್ದಾರ್‌ಗೆ ಪತ್ರ ಬರೆದದ್ದು ಬಿಟ್ಟರೆ ಬೇರೇನೂ ಪ್ರಯತ್ನ ಮಾಡಿಲ್ಲ.

ಈ ಭೂಮಿಯನ್ನು ಮರಳಿ ವಶಕ್ಕೆ ಪಡೆದು ಅರಣ್ಯ ಬೆಳೆಸುವ ಪ್ರಯತ್ನವನ್ನೇ ಮಾಡಿಲ್ಲ. ಹಾಸನ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೂಡ ನಿರ್ಲಕ್ಷಿಸಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಅಸಹನೆ ಹೊರ ಹಾಕಿದ್ದು, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಟಿಪ್ಪಣಿ ಕಳುಹಿಸಿ ಕ್ರಮಕ್ಕೆ ಸೂಚಿಸಿದ್ದಾರೆ.