ಬೆಂಗಳೂರು: ಅರಣ್ಯ ಭೂಮಿಯನ್ನು ಕಂದಾಯ ಜಮೀನನ್ನಾಗಿ ಬದಲಾವಣೆ ಮಾಡಿ ಕರ್ತವ್ಯಲೋಪ ಎಸೆಗಿರುವ ಹಾಸನ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು (ಎಂಒಎ್) ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಬೆನ್ನಲ್ಲೇ, ಆರೋಪಿತ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅರಣ್ಯ ಇಲಾಖೆ ಮುಂದಾಗಿದೆ.
ಸುಪ್ರೀಂಕೋರ್ಟ್ ಆದೇಶ ಉಲ್ಲಂಸಿ ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ವಿಚಾರದಲ್ಲಿ ವರದಿ ಕೋರಿದ್ದ ಎಂಒಎ್ಗೆ ಒಂದೂವರೆ ವರ್ಷವಾದರೂ ಮಾಹಿತಿ ರವಾನೆಯಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತಿಂಗಳೊಳಗೆ ವರದಿ ಸಲ್ಲಿಸದಿದ್ದಲ್ಲಿ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ -2023 (ಅರಣ್ಯ ಸಂರಕ್ಷಣಾ ಕಾಯ್ದೆ 1980) ಅಡಿಯಲ್ಲಿ ತಾನೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.
ಈ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಇತ್ತೀಚಿಗೆ ಎಂಒಎ್ಗೆ ವರದಿ ರವಾನಿಸಿತ್ತು. ಇದನ್ನಾಧರಿಸಿ ಆರೋಪಿತ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕಳೆದ ಗುರುವಾರ (ಡಿ.14) ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದೆ. ಪತ್ರದಲ್ಲಿರುವ ಅಂಶಗಳನ್ನು ಆಧರಿಸಿ ಆರೋಪಿತ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವಂತೆ ಅರಣ್ಯ ಸಚಿವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ 15 ದಿನಗಳ ಹಿಂದೆಯಷ್ಟೇ ಇಂತಹದ್ದೇ ಪ್ರಕರಣದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗಾಧಿಕಾರಿ ಡಾ. ಎಂ.ಜಿ.ಶಿವಣ್ಣ ಹಾಗೂ ತಹಸೀಲ್ದಾರ್ ಅಜಿತ್‌ಕುಮಾರ್ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿರ್ಧಾರ ಕೈಗೊಂಡಿತ್ತು.
ಏನಿದು ಪ್ರಕರಣ?:
ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ತ್ಯಾವಿಹಳ್ಳಿಯಲ್ಲಿ ಸರ್ವೆ ನಂ. 22ರಲ್ಲಿ 61 ಎಕರೆ 32 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿ ಇದೆ. 1980ರಿಂದಲೂ ಪಹಣಿ ದಾಖಲೆಗಳಲ್ಲಿ ಅರಣ್ಯ ಇಲಾಖೆಯೆಂದೇ ನಮೂದಾಗಿದೆ. 1980-81ನೇ ಸಾಲಿನ ಪಹಣಿಯಲ್ಲಿ ಪರಿಶಿಷ್ಟ ಭೂಮಿ ಎಂದೂ ನಮೂದಾಗಿರುವ ಉಲ್ಲೇಖ ಇದೆ. ಇತ್ತೀಚಿನವರೆಗೂ ಈ ಜಮೀನನ್ನು ನೆಡುತೋಪಾಗಿ ಅಭಿವೃದ್ಧಿಪಡಿಸುವಲ್ಲಿ ಅರಣ್ಯ ಇಲಾಖೆ ಮುತುವರ್ಜಿ ತೋರಿಸಿದೆ. 2021ರಲ್ಲಿ 9 ಮಂದಿ ಈ ಜಮೀನು ತಮ್ಮದೆಂದು ಹಕ್ಕು ಸಾಧಿಸಿ ಸಾಗುವಳಿ ಮಾಡುತ್ತಿರುವುದರಿಂದ ಕಂದಾಯ ಜಮೀನಾಗಿ ಬದಲಾಯಿಸಿಕೊಡುವಂತೆ ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ತಗಾದೆ ಎತ್ತಿದ್ದರು. ವಿಚಾರಣೆ ವೇಳೆ ಎಸಿ ಅವರು ಮೇಲ್ಮನವಿದಾರರ ಹೇಳಿಕೆಯಂತೆ ಗೋಮಾಳ ಜಮೀನು ಎಂಬುದಾಗಿ ವಾದಿಸಿದ ಪರಿಣಾಮ ಸಾಗುವಳಿ ಜಮೀನಾಗಿ ಪರಿವರ್ತಿಸಲು ಎಸಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಅರಣ್ಯ ಭೂಮಿಗೆ ಹೊಂದಿಕೊಂಡಂತೆ 2003-4ರಲ್ಲಿ ಬೆಂಗಳೂರು-ಹಾಸನ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ ಹಾಗೂ 2012-13ರಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿ ವಿಸ್ತರಣೆಗೆ ಜಮೀನು ಪಡೆಯಲು ಕೇಂದ್ರ ಅರಣ್ಯ ಸಚಿವಾಲಯದ ಒಪ್ಪಿಗೆ ಪಡೆಯಲಾಗಿತ್ತು. ಈ ಅಂಶವನ್ನು ಪರಿಗಣಿಸದೆ ಎಸಿ ಅವರು ಕಂದಾಯ ಜಮೀನಾಗಿ ಬದಲಾಯಿಸಿದ ಪರಿಣಾಮ ಪ್ರಕರಣದಲ್ಲಿ ಕರ್ತವ್ಯಲೋಪ ಹಾಗೂ ಅರಣ್ಯ ಭೂಮಿ ಪರಭಾರೆ ಮಾಡಿರುವ ಆರೋಪವನ್ನು ಎದುರಿಸುವಂತಾಗಿದೆ. ಇದೀಗ ಎಸಿ ವಿರುದ್ಧ ಕ್ರಿಮಿನಲ್ ದಾವೆ ಹೂಡಲು ಇಲಾಖೆ ಮುಂದಾಗಿದೆ.
ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಜೂರಾತಿ ಮಾಡುವ ಅಧಿಕಾರಿ ರಾಜ್ಯ ಸರ್ಕಾರ ಅಥವಾ ಎಸಿ, ಡಿಸಿಗೆ ಇಲ್ಲ. ಹೀಗಿದ್ದರೂ, ವಿಷಯವ ಮಹತ್ವ ಅರಿಯದೆ ಕಂದಾಯ ಜಮೀನಾಗಿ ಬದಲಾಯಿಸಿರುವ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಭೂಮಿ ಪರಭಾರೆ ವಿಚಾರದಲ್ಲಿ ಯಾರೇ ತಪ್ಪಿತಸ್ಥ ಅಧಿಕಾರಿ ಇದ್ದರೂ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕದು.
- ಈಶ್ವರ ಖಂಡ್ರೆ, ಅರಣ್ಯ ಸಚಿವ