ಶಿವಮೊಗ್ಗ ವಿನೋಬನಗರದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಯೋಗ ಭವನವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಡಾ. ಕವಿತಾ ಯೋಗಪ್ಪನವರ್, ಎಸ್.ರವಿಕುಮಾರ್, ಚಂದ್ರಭೂಪಾಲ್ ಇತರರಿದ್ದರು. 
ನ್ಯೂಸ್

ಅಧ್ಯಾತ್ಮ, ಯೋಗಾಭ್ಯಾಸಕ್ಕೆ ವಿದೇಶಿಯರ ಒಲವು: ಬಿವೈಆರ್

ಶಿವಮೊಗ್ಗ: ಇಂದು ವಿಶ್ವವೇ ಭಾರತದ ಅಧ್ಯಾತ್ಮ ಹಾಗೂ ಯೋಗ ಕಡೆಗೆ ಒಲವು ತೋರುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಯೋಗ ಹೆಚ್ಚು ಜನಪ್ರಿಯ ಆಗುತ್ತಿರುವುದು ಸಂತೋಷದ ವಿಷಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ವಿನೋಬನಗರದಲ್ಲಿ ಪಾಲಿಕೆಯಿಂದ ನಿರ್ಮಿಸಿರುವ ಯೋಗ ಭವನ ಮತ್ತು ವಾಣಿಜ್ಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಜನಪ್ರತಿನಿಧಿಗಳು ಸಂಸ್ಕಾರ ಮತ್ತು ಸಂಸ್ಕೃತಿಗೆ ಒತ್ತು ನೀಡುತ್ತಿದ್ದಾರೆ ಎಂದರು.

ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ವಿನೋಬನಗರದ ನಾಗರಿಕರಿಗೆ ಯೋಗ ಭವನದಿಂದ ಸಾಕಷ್ಟು ಅನುಕೂಲವಾಗಲಿದೆ. ಈ ಯೋಗ ಕೇಂದ್ರಕ್ಕೆ ಅಜಿತ್‌ಜೀ ಹೆಸರನ್ನು ನಾಮಕರಣ ಮಾಡಲಾಗಿದೆ. ಶ್ರೀನಿವಾಸಮೂರ್ತಿ ಹಾಗೂ ಅರವಿಂದ ಇಲ್ಲಿ ಯೋಗ ಶಿಕ್ಷಕರಾಗಿ ಉಚಿತ ಸೇವೆ ಒದಗಿಸುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್, ರಾಜೇಶ್ ಕಾಮತ್, ಮಹೇಶಮೂರ್ತಿ ಇತರರಿದ್ದರು.