ನ್ಯೂಸ್

ಎಷ್ಟಾದರೂ ಕ್ಲಿಕ್ಕಿಸಿಕೊಳ್ಳಿ! ಆದ್ರೆ... ದುಡಿಮೆ ಇಷ್ಟೊಂದು ಸುಲಭನಾ? ವಿದೇಶಿ ಮಹಿಳೆಯ ಕಿಲಾಡಿತನಕ್ಕೆ ಬೆರಗಾದ ನೆಟ್ಟಿಗರು | Viral Video

Viral Video: ಭಾರತದ ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಗಳನ್ನು ಕಂಡರೆ ವಿದೇಶಿಗರು ಬಹಳ ಉತ್ಸಾಹ ತೋರುತ್ತಾರೆ. ಇಲ್ಲಿನ ಐತಿಹಾಸಿಕ ಹಾಗೂ ಪ್ರಸಿದ್ಧ ತಾಣಗಳನ್ನು ನೋಡಲೆಂದು ಸಾವಿರಾರು ಕಿಲೋಮಿಟರ್​ ದೂರದಿಂದ ಭಾರತಕ್ಕೆ ಆಗಮಿಸಿ, ಸುಂದರ ಜಾಗಗಳನ್ನು ಅನ್ವೇಷಿಸುತ್ತಾರೆ. ಕೆಲವರು ಸುಮ್ಮನೇ ಪ್ರವಾಸ ಕೈಗೊಂಡರೆ, ಇನ್ನೂ ಕೆಲವರು ದೇಶದ ಸ್ಥಳಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು, ಅದನ್ನು ತಮ್ಮ ವೀಕ್ಷಕರಿಗೆ ತೋರಿಸಲು ಬಯಸುತ್ತಾರೆ. ಸದ್ಯ ಇಲ್ಲೊಬ್ಬಳು ಮಹಿಳೆ ಕೂಡ ಇದೇ ಸಾಲಿಗೆ ಸೇರಿದ್ದು, ಭಾರತದ ಕಡಲ ತೀರದಲ್ಲಿ ಸುಲಭವಾಗಿ ಹಣ ಮಾಡಿಕೊಳ್ಳುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಗೋವಾ, ಅಂಡಮಾನ್ ಅಂಡ್ ನಿಕೋಬರ್​, ಲಕ್ಷದ್ವೀಪ ಹೀಗೆ ಮುಂತಾದ ಕಡಲ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ವಿದೇಶಿಗರು, ಅಲ್ಲಿನ ಸೌಂದರ್ಯ, ವಾತಾವರಣವನ್ನು ಆನಂದಿಸುತ್ತಾರೆ. ವಿದೇಶಿಯರನ್ನು ತಮ್ಮ ನೆಲದಲ್ಲಿ ಕಂಡರೆ ಜನರು ಸುಮ್ಮನಿರುತ್ತಾರಾ ಹೇಳಿ? ಅವರೊಂದಿಗೆ ಒಂದೊಳ್ಳೆ ಸೆಲ್ಫಿ ಇಲ್ಲ ಫೋಟೋ ಬೇಕೇ ಬೇಕು. ಅದೇನೋ ವಿದೇಶಿಗರ ಮೈಬಣ್ಣ, ಅವರ ಭಾಷೆ, ಉಡುಗೆ-ತೊಡುಗೆ ನೋಡಿದ್ರೆ, ಅವರೇನೋ ನಮಗಿಂತ ವಿಭಿನ್ನ ಅನಿಸೋದು ಸಾಮಾನ್ಯ. ಇದೇ ಕಾರಣಕ್ಕೆ ಬಹುತೇಕರು ಅವರ ಜತೆ ಇಂತಹ ಸಮುದ್ರ ತಾಣಗಳಲ್ಲಿ ಫೋಟೋ, ಸೆಲ್ಫಿ ಕೇಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ವಿದೇಶಿ ಮಹಿಳೆ, ಒಂದು ಫೋಟೋ/ ಸೆಲ್ಫಿ ಕ್ಲಿಕ್ಕಿಸಿಕೊಂಡರೆ 100 ರೂ. ಎಂದು ಹೇಳಿ, ಸುಲಭವಾಗಿ ಜನರಿಂದ ಹಣ ಸಂಪಾದಿಸುತ್ತಿರುವ ದೃಶ್ಯಗಳು ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.

ಒಂದಲ್ಲ, ಎಷ್ಟಾದರೂ ಪೋಟೋ ಕ್ಲಿಕ್ಕಿಸಿಕೊಳ್ಳಿ ಆದರೆ, 'ಒಂದು ಪೋಟೋಗೆ 100 ರೂ.' ಎಂದು ನಾಮಫಲಕದಲ್ಲಿ ಬರೆದು, ಅದನ್ನು ತನ್ನ ಕುತ್ತಿಗೆಗೆ ನೇತುಹಾಕಿಕೊಂಡಿದ್ದಾಳೆ. ಆಕೆಯನ್ನು ನೋಡುತ್ತಿದ್ದ ಇತರೆ ಪ್ರವಾಸಿಗರು, ಮಹಿಳೆಯೊಂದಿಗೆ ಫೋಟೋಗಳನ್ನು ತೆಗೆಸಿಕೊಳ್ಳಲು ಮುಂದೆ ಬಂದಿದ್ದಾರೆ. ಈ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಉದ್ಯೋಗ ಹುಡುಕಿಕೊಳ್ಳುವುದು ಇಷ್ಟೊಂದು ಸುಲಭನಾ? ದುಡಿಮೆ ಎಷ್ಟು ಸಲಿಸಲ್ಲವೇ? ಎಂದೆಲ್ಲಾ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).