ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಲು ವಿದೇಶಿ ಕಂಪನಿಗಳು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಹಕರಿಸುತ್ತಿಲ್ಲ. ವಿದೇಶಿ ಮೂಲದ 34 ಕ್ರಿಪ್ಟೋ ಕರೆನ್ಸಿ ಕಂಪನಿಗಳ ಎಸ್‌ಐಟಿ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಇದರಿಂದ ಪ್ರಕರಣದಲ್ಲಿ ರಿಕವರಿ ಮಾಡಲು ಸಾಧ್ಯವಾಗದೆ ತನಿಖಾಧಿಕಾರಿಗಳಿಗೆ ಸಂಕಷ್ಟವಾಗಿದೆ.
ಸರ್ಕಾರಿ ವೆಬ್‌ಸೈಟ್, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್, ಗೇಮಿಂಗ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ವರ್ಗಾವಣೆ ಮಾಡಿರುವ ಬಿಟ್ ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸಹಚರರು ವಿರುದ್ಧ ಕೇಳಿಬಂದಿದೆ. ಶ್ರೀಕಿ, ವಿಚಾರಣೆ ವೇಳೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇಷ್ಟೇ ಪ್ರಮಾಣದಲ್ಲಿ ಬಿಟ್ ಕಾಯಿನ್ ವರ್ಗಾವಣೆ ಮಾಡಿರುವುದಾಗಿ ಸಮಗ್ರ ಹೇಳಿಕೆ ನೀಡಿಲ್ಲ. ಆರೋಪಿಯ ಹೇಳಿಕೆಯನ್ನು ನೈಜತೆ ಪರಿಶೀಲಿಸಲು ದೇಶ-ವಿದೇಶಗಳ ಆನ್‌ಲೈನ್ ಗೇಮಿಂಗ್ ಮತ್ತು ಬಿಟ್ ಕಾಯಿನ್ ಎಕ್ಸೃ್ಚೇಂಜ್ ಕಂಪನಿಗಳಿಗೆ ಇಂಟರ್ ಪೋಲ್ ಮೂಲಕ ಮಾಹಿತಿ ಕೋರಿ ಎಸ್‌ಐಟಿ ಪತ್ರ ಬರೆದಿತ್ತು.
ಪತ್ರ ಬರೆದು ಹಲವು ತಿಂಗಳೇ ಕಳೆದರು ಇಲ್ಲಿಯವರೆಗೂ ಕಂಪನಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಎಸ್‌ಐಟಿ ತನಿಖೆಗೆ ತೊಡಕು ಉಂಟಾಗಿದ್ದು, ಕೆಲದಿನಗಳ ಬಳಿಕ ಮತ್ತೆ ಇಂಟರ್ ಪೋಲ್ ಮೂಲಕ ಮನವಿ ಪತ್ರ ನೀಡಲು ಸಿದ್ಧತೆ ನಡೆಸಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್ ಮತ್ತು ಡ್ರಗ್ಸ್ ದಂಧೆಯಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ಸೇರಿದಂತೆ ಕೆ.ಜಿ.ನಗರ, ಕಾಟನ್‌ಪೇಟೆ, ಅಶೋಕನಗರ, ಕಬ್ಬನ್ ಪಾರ್ಕ್, ತುಮಕೂರು ನ್ಯೂ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಯಲ್ಲಿ ಸೇರಿದಂತೆ 8 ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡಿದೆ.
ಬಿಟ್‌ಕಾಯಿನ್ ಟ್ರೇಡಿಂಗ್, ಬ್ಲಾಕ್ ಚೈನ್, ಡಾರ್ಕ್ ವೆಬ್‌ಗಳನ್ನು ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ. ಯುಎಸ್‌ಎ, ಹಾಂಗ್‌ಕಾಂಗ್, ಕೋರಿಯಾ, ಸಿಂಗಾಪುರ, ಇರಾನ್, ಫಿನ್‌ಲ್ಯಾಂಡ್, ಟರ್ಕಿ, ನೈಜೀರಿಯಾ, ಲೆಕ್ಸಂಬರ್ಗ್ ದೇಶಗಳಿಗೆ ಮಾಹಿತಿ ಕೋರಿ ಎಸ್‌ಐಟಿ ಪತ್ರ ಬರೆದಿದೆ. ಇದಲ್ಲದೆ, ಐರ್ಲೆಂಡ್, ಸಿಷೆಲ್ಸ್, ಸ್ವಿಜರ್‌ಲ್ಯಾಂಡ್ ಮುಂತಾದ ದೇಶಗಳಿಂದ ಅಗತ್ಯ ಮಾಹಿತಿ ತರಿಸಿಕೊಡುವಂತೆ ಕೋರಿ ಇಂಟರ್‌ಪೋಲ್ ಮುಖಾಂತರ ಎಸ್‌ಐಟಿ ಮನವಿ ಮಾಡಿತ್ತು. ಇಲ್ಲಿಯವರೆಗೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್ ಹಗರಣದ 8 ಪ್ರಕರಣಗಳ ತನಿಖೆ ಕೈಗೊಂಡಿರುವ ಎಸ್‌ಐಟಿ, 150ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿ ಸಾಕ್ಷಿಗಳಾಗಿ ಹೇಳಿಕೆ ದಾಖಲಿಸಿಕೊಂಡಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಶೀಘ್ರದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಕಾಟನ್‌ಪೇಟೆ ಠಾಣೆಯಲ್ಲಿ ಎಸ್‌ಐಟಿ ದೂರಿನ ಮೇರೆಗೆ ದಾಖಲಿಸಿರುವ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸೇರಿ ನಾಲ್ವರನ್ನ ಬಂಧಿಸಲಾಗಿದೆ. ಮತ್ತೊಬ್ಬ ಅಧಿಕಾರಿಯನ್ನು ಬಂಧಿಸದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಿದೆ. ಈ ಆದೇಶ ತೆರವುಗೊಳಿಸಲು ರಿಟ್ ಪಿಟಿಷನ್ ಹಾಕಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.