ನ್ಯೂಸ್

ಜಪ್ತಿ ವಾಹನ ಇಂದಿನಿಂದ ವಾಪಸ್: ಲಾಕ್​ಡೌನ್ ಉಲ್ಲಂಘಿಸಿದ ವಾಹನಗಳೆಷ್ಟು ಗೊತ್ತಾ?

ಬೆಂಗಳೂರು: ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಅಪರಾಧಕ್ಕಾಗಿ ಜಪ್ತಿ ಮಾಡಲಾಗಿರುವ ವಾಹನಗಳನ್ನು ಶುಕ್ರವಾರದಿಂದ (ಮೇ1) ಮಾಲೀಕರಿಗೆ ವಾಪಸ್ ನೀಡಲು ನಗರ ಪೊಲೀಸರು ನಿರ್ಧರಿಸಿದ್ದಾರೆ. ಜಪ್ತಿಯಾಗಿರುವ ಒಟ್ಟು 48,567 ವಾಹನಗಳಿಂದ, ಕನಿಷ್ಠ 2.5 ಕೋಟಿ ರೂ. ದಂಡ ವಸೂಲಿಯಾಗಲಿದೆ.

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಮಾ.25ರಿಂದ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಈ ನಡುವೆಯೂ ವಾಹನ ಸವಾರರು ರಸ್ತೆಗೆ ಇಳಿಯುವುದನ್ನು ನಿಲ್ಲಿಸಿರಲಿಲ್ಲ. ಆದ್ದರಿಂದ ಮಾ.30ರಿಂದ ಕೆಎಸ್​ಪಿ ಕ್ಲಿಯರ್ ಪಾಸ್ ಇಲ್ಲದೆ ಹಾಗೂ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆ ವಾಹನಗಳನ್ನು ವಾಪಸ್ ನೀಡುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

ಹಂತಹಂತವಾಗಿ ಬಿಡುಗಡೆ: ಜಪ್ತಿ ಮಾಡಲಾದ ವಾಹನಗಳ ವಿಲೇವಾರಿಯನ್ನು ಆಯಾ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಿಗೆ ಒಪ್ಪಿಸಲಾಗಿದೆ. ಅಲ್ಲದೆ, ಒಂದೇ ದಿನಕ್ಕೆ ಎಲ್ಲ ವಾಹನಗಳನ್ನು ಹಸ್ತಾಂತರಿಸಲು ಅಸಾಧ್ಯ. ವಾಹನ ಪಡೆಯಲು ಏಕಾಏಕಿ ಸಾವಿರಾರು ಜನ ಸೇರುತ್ತಾರೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಹಂತಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲು ಜಪ್ತಿಯಾದ ವಾಹನಗಳನ್ನು ಮೊದಲಿಗೆ ಹಿಂದಿರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಹಳೇ ದಂಡ ವಸೂಲಿ: ವಾಹನ ಹಿಂಪಡೆಯಲು ನೋಂದಣಿ ಪುಸ್ತಕ (ಆರ್​ಸಿ), ವಿಮೆ, ಮಾಲೀಕರ ಚಾಲನಾ ಪರವಾನಗಿ (ಡಿಎಲ್) ಮೂಲ ದಾಖಲೆ ಒದಗಿಸಬೇಕು. ಅಲ್ಲದೆ, ಲಾಕ್​ಡೌನ್ ದಂಡದ ಜೊತೆಗೆ ಸಂಚಾರ ನಿಯಮ ಉಲ್ಲಂಘನೆಯ ಹಳೇ ದಂಡ ಬಾಕಿ ಇದ್ದಲ್ಲಿ ಅದನ್ನೂ ಪಾವತಿಸಬೇಕು. ಈ ಬಗ್ಗೆ ಪರಿಶೀಲಿಸಿ ಆಯಾ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಸೂಚಿಸಿದ್ದಾರೆ.

ಕೋರ್ಟ್ ಸೂಚನೆಯಂತೆ ಮುಚ್ಚಳಿಕೆ ಬರೆಸಿಕೊಂಡು, ದಂಡ ವಿಧಿಸಿ ವಾಹನಗಳನ್ನು ವಾಪಸ್ ಮಾಡಲಾಗುವುದು. ಮತ್ತೆ ಲಾಕ್​ಡೌನ್ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯ 35 ಸಾವಿರ ವಾಹನಗಳ ಬಿಡುಗಡೆಗೆ ಅನುಮತಿ ಇದೆ. | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ

ಬಿಡುಗಡೆಗೆ ಹೈಕೋರ್ಟ್ ಸೂಚನೆ

ಲಾಕ್​ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದಿದ್ದ ಹಿನ್ನೆಲೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ವಾಹನಗಳಿಗೆ ದಂಡ ವಿಧಿಸಿ ಬಿಡುಗಡೆ ಮಾಡಲು ಬೆಂಗಳೂರು ಪೊಲೀಸರಿಗೆ ಗುರುವಾರ ಹೈಕೋರ್ಟ್ ಅನುಮತಿ ನೀಡಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿತು. ಲಾಕ್​ಡೌನ್ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 500 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಬೇಕು. ಮತ್ತೆ ಲಾಕ್​ಡೌನ್ ಆದೇಶ ಉಲ್ಲಂಘಿಸದಂತೆ ಮಾಲೀಕರಿಗೆ ಷರತ್ತು ವಿಧಿಸಿ, ಮುಚ್ಚಳಿಕೆ ಬರೆಸಿಕೊಳ್ಳಬೇಕೆಂದು ನ್ಯಾಯಪೀಠ ಪೊಲೀಸರಿಗೆ ನಿರ್ದೇಶನ ನೀಡಿತು.

ವಶ ಪ್ರಕ್ರಿಯೆ ಮುಂದುವರಿಕೆ

ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಇನ್ನು ಮುಂದೆಯೂ ಜಪ್ತಿ ಮಾಡಲಾಗುತ್ತದೆ. ಲಾಕ್​ಡೌನ್ ಮುಗಿಯುವರೆಗೂ ವಾಹನಗಳಿಗೆ ಕೆಎಸ್​ಪಿ ಕ್ಲಿಯರ್ ಪಾಸ್ ಕಡ್ಡಾಯವಾಗಿದೆ. ಒಮ್ಮೆ ದಂಡ ಕಟ್ಟಿದ್ದೇವೆ ಎಂದು ಉಡಾಫೆಯಿಂದ ಮತ್ತೆ ರಸ್ತೆಗೆ ಇಳಿಯುವಂತಿಲ್ಲ. ಈ ಹಿಂದೆ ಜಪ್ತಿ ಮಾಡಿದ ವಾಹನಗಳು ಮತ್ತೇ ಸಿಕ್ಕಿಬಿದ್ದರೆ ಮಾಲಿಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.