ನ್ಯೂಸ್

ಈ ಥರ ಕೊಲೆ ಪ್ರಕರಣ ಭೇದಿಸಿದ್ದು ರಾಜ್ಯದಲ್ಲಿ ಇದೇ ಮೊದಲು!; ವರ್ಷದ ಹಿಂದೆ ನಡೆದಿದ್ದ ಹತ್ಯೆ, ಬಯಲಾಯ್ತು ಭಯಾನಕ ಸತ್ಯ

ರಾಮನಗರ: ವಿಶೇಷವಾದ ರೀತಿಯಲ್ಲಿ ಕೊಲೆ ಪ್ರಕರಣವೊಂದನ್ನು ಭೇದಿಸುವ ಮೂಲಕ ಪೊಲೀಸರು ರಾಜ್ಯದಲ್ಲೇ ಇದು ಪ್ರಥಮ ಎಂಬಂಥ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಈ ಮುಖೇನ ಒಂದು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಂತಾಗಿದೆ. ಇಂಥದ್ದೊಂದು ಹೆಗ್ಗಳಿಕೆ ರಾಮನಗರ ಪೊಲೀಸರು ಭಾಜನರಾಗಿದ್ದಾರೆ.

ಕಳೆದ ವರ್ಷ ಕನಕಪುರ ಟೌನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೇಯಸ್ ಎಂಬ ಬಾಲಕ ಕಾಣೆಯಾಗಿದ್ದು, ಬಳಿಕ ಆತನ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ಕನಕಪುರ‌ದ ವಕೀಲ ಶಂಕರೇಗೌಡನ ಮೇಲೆ ದೂರು ನೀಡಿದ್ದರು. ಈ ಮೇರೆಗೆ ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಏನೇ ತನಿಖೆ ಮಾಡಿದರೂ ಸತ್ಯಾಸತ್ಯತೆ ಹೊರಬಾರದ್ದರಿಂದ ಕೊನೆಯದಾಗಿ ಪೊಲೀಸರು ಬ್ರೇನ್ ಮ್ಯಾಪಿಂಗ್ ಪರೀಕ್ಷೆಯ ಮೊರೆ ಹೋಗಿದ್ದರು.

ಆರೋಪಿಯನ್ನು ಬ್ರೇನ್​ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದು, ನ್ಯಾಯಾಲಯ ಅದಕ್ಕ ಒಪ್ಪಿಗೆ ನೀಡಿತ್ತು. ಆ ಮೇರೆಗೆ ರಾಜ್ಯದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿರುವ ನೂತನ ಬಿಇಒಎಸ್ ತಂತ್ರಜ್ಞಾನದ ಮೂಲಕ ಆರೋಪಿಯನ್ನು ಬ್ರೇನ್​ ಮ್ಯಾಪಿಂಗ್​ಗೆ ಒಳಪಡಿಸಲಾಗಿತ್ತು. ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡು ಕೊಲೆ ಮಾಡಿ ಕೆರೆಗೆ ಹಾಕಿದ್ದು ಆರೋಪಿಯ ಬ್ರೇನ್ ಮ್ಯಾಪಿಂಗ್ ಪರೀಕ್ಷೆ ವೇಳೆ ತಿಳಿದುಬಂದಿತ್ತು. ಈ ಆಧಾರದಲ್ಲಿ ಪೊಲೀಸರು ಕೊಲೆ ರಹಸ್ಯದ ಕುರಿತು ಹೆಚ್ಚುವರಿ ಅರೋಪ ಪಟ್ಟಿ ಸಲ್ಲಿಸಿದ್ದಾರೆ.

ರಾಮನಗರ ಪೊಲೀಸರು ಹೀಗೆ ಬ್ರೇನ್​ ಮ್ಯಾಪಿಂಗ್ ಮೂಲಕ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ರಹಸ್ಯ ಬೇಧಿಸಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಕರಣ ಎಂದೆನಿಸಿಕೊಂಡಿದೆ. ಆರೋಪಿಯ ಬ್ರೇನ್​ ಮ್ಯಾಪಿಂಗ್ ಮೂಲಕ ಕೊಲೆ ರಹಸ್ಯ ಬಯಲು ಮಾಡಲಾಗಿದ್ದು, ಅದರ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಸಲ ಆರೋಪಿಗೆ ಬ್ರೇನ್ ಮ್ಯಾಪಿಂಗ್ ಮಾಡಲಾಗಿದ್ದು, ಕಳೆದೊಂದು ವರ್ಷದಿಂದ ಪೋಲಿಸರಿಗೆ ತಲೆನೋವಾಗಿದ್ದ ಪ್ರಕರಣ ಮುಕ್ತಾಯ ಹಂತ ತಲುಪುವ ಲಕ್ಷಣಗಳು ಗೋಚರಿಸಿವೆ.