ನ್ಯೂಸ್

ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಿ; ಬಿಇಒ

ರಾಣೆಬೆನ್ನೂರ: ಶಿಕ್ಷಕರು ಅಂಕಗಳ ಹಿಂದೆ ಬೀಳದೆ ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ಮನದಟ್ಟು ಮಾಡಬೇಕು. ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.
ಇಲ್ಲಿಯ ಲಯನ್ಸ್ ಶಾಲೆಯ ಆವರಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಲಯನ್ಸ್ ಕ್ಲಬ್ ವತಿಯಿಂದ ಕ್ಲಸ್ಟರ್ 1,2 ಮತ್ತು 3ರ ಪ್ರಾಥಮಿಕ ಶಾಲಾ ಗಣಿತ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಓರೇಗಾಮಿ ಕೌಶಲಾಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕೌಶಲ ಶಿಬಿರದಲ್ಲಿ ಕಲಿತ ವಿಷಯಗಳ ಪ್ರಯೋಜನ ನೇರವಾಗಿ ಮಕ್ಕಳನ್ನು ತಲುಪಿದಾಗ ಮಾತ್ರ ತರಬೇತಿ ಸಾರ್ಥಕವಾಗುತ್ತದೆ ಎಂದರು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಆರ್.ವಿ. ಸೂರಗೊಂಡ, ಪ್ರಭುದೇವ ತುವಾರ, ಪಲ್ಲವಿ ನಾಯಕ, ಕುಬೇರ ಕಮ್ಮಾರ, ಜೆ.ಸಿ. ಸಂಗೊಳ್ಳಿ, ಎನ್.ನಾಗರಾಜ, ರಮೇಶ ಗುಂಜಾಳ, ಜೆ.ಎಂ. ಬಿದರಿ, ಎಂ.ಎಚ್. ಪಾಟೀಲ, ಎಂ.ಜಿ. ಮಣ್ಣಮ್ಮನವರ ಮತ್ತಿತರರು ಉಪಸ್ಥಿತರಿದ್ದರು.