ನ್ಯೂಸ್

ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಲು ಆಗ್ರಹ; ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

Haveri - Kariyappa Aralikatti

ರಾಣೆಬೆನ್ನೂರ: ರಾಜ್ಯ ಸರ್ಕಾರ ಕೂಡಲೇ ವಿದ್ಯಾರ್ಥಿಗಳ ವಸತಿ ನಿಲಯಗಳ ಪ್ರವೇಶ ಅರ್ಜಿ ಆಹ್ವಾನಿಸಬೇಕು. ಆದಷ್ಟು ಬೇಗ ಆಯ್ಕೆ ಪಟ್ಟಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಮುನ್ಸಿಪಲ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದಿದೆ. ಆದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಮೂಲಕ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರು ವಸತಿ ನಿಲಯಗಳಲ್ಲಿ ಸಾವಿರಾರು ಸೀಟುಗಳು ಖಾಲಿ ಇದ್ದರು ಅರ್ಜಿ ಕರೆಯದೆ ನಿರ್ಲಕ್ಷೃ ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿಕೊಂಡು ಈಗಾಗಲೇ ಮುಂದಿನ ಶಿಕ್ಷಣಕ್ಕೆ ಹೋಗಿರುತ್ತಾರೆ ಮತ್ತು ಹೊಸ ವಿದ್ಯಾರ್ಥಿಗಳು ಈಗಾಗಲೇ 5,6,7,8,9ನೇ ಹಾಗೂ ಪಿಯುಸಿ ತರಗತಿಗಳಿಗೆ ದಾಖಲಾತಿ ಮಾಡಿಸಿದ್ದಾರೆ. ರಾಜ್ಯದ ಮತ್ತು ಜಿಲ್ಲೆಯಲ್ಲಿ ಬಹುತೇಕ ಶಾಲಾ-ಕಾಲೇಜ್‌ಗಳಲ್ಲಿ ತರಗತಿಗಳು ಪ್ರಾರಂಭವಾಗಿವೆ. ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ವಸತಿಗಾಗಿ ನಿಲಯಗಳ ಮೇಲೆ ಅವಲಂಬಿತರಾಗಿದ್ದಾರೆ.
ಆದರೆ, ರಾಜ್ಯ ಸರ್ಕಾರ ವಸತಿ ನಿಲಯಗಳಿಗೆ ಇನ್ನೂ ಅರ್ಜಿ ಆಹ್ವಾನಿಸದ ಕಾರಣ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಿರೀಶ ಹೊಸಮನಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಪ್ರಸಾದ ಆಲದಕಟ್ಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಶ್ರೀಧರ ಸಿ., ನೇಹಾಲಖಾನ್ ಗಂಗಾವತಿ, ಗೌತಮ ಸಾವಕ್ಕನವರ, ಅಭಿಷೇಕ ಕುಸಗೂರ, ಪವಿತ್ರ ಎಚ್.ಕೆ., ನಾಗರತ್ನ ಬಿ.ಎಸ್., ಭವ್ಯ ಆರ್.ಕೆ. ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.