ನ್ಯೂಸ್

ಶಾಲಾ ಮಕ್ಕಳಿಗೆ ಇ-ಪಾಠ ಕಣ್ಣಿಗೆ ಕಾಟ!

chandru

| ಪಂಕಜ ಕೆ.ಎಂ. ಬೆಂಗಳೂರು

ಕರೊನಾ ಕಾರಣದಿಂದಾಗಿ ಖಾಸಗಿ ಶಾಲಾ ಮಕ್ಕಳಿಗೆ ಆನ್​ಲೈನ್ ಪಾಠ ನಡೆಯುತ್ತಿದ್ದು, ಇದೇ ಈಗ ಆರೋಗ್ಯಕ್ಕೆ ಕಾಟವಾಗಿ ಕಾಡಲಾರಂಭಿಸಿದೆ. ಕರೊನಾ ಕಾಲಿಟ್ಟ ಬಳಿಕ ರಾಜ್ಯದಲ್ಲಿ ಮಕ್ಕಳ ಕಣ್ಣಿನ ಸಮಸ್ಯೆ ಪ್ರಕರಣಗಳ ಸಂಖ್ಯೆ ಶೇ.30 ಹೆಚ್ಚಾಗಿದೆ.

ಬೆಂಗಳೂರಿನ ನಾರಾಯಣ ನೇತ್ರಾಲಯ, ಮಿಂಟೋ ಆಸ್ಪತ್ರೆಯಂತಹ ಪ್ರಮುಖ ಕಣ್ಣಿನ ಆಸ್ಪತ್ರೆಗಳಿಗೆ ಕಣ್ಣಿನ ಸಮಸ್ಯೆ ಹೊತ್ತು ಬರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಮೊಬೈಲ್, ಲ್ಯಾಪ್​ಟಾಪ್, ಕಂಪ್ಯೂಟರ್ ಹಾಗೂ ವಿಡಿಯೋ ಗೇಮ್ ಅತಿಯಾದ ವೀಕ್ಷಣೆಯಿಂದ ಎದುರಾಗುತ್ತಿದ್ದ ದೃಷ್ಟಿ ಸಮಸ್ಯೆ ಮುಂದಿಟ್ಟುಕೊಂಡು ನಿತ್ಯ ಸರಾಸರಿ 3 ರಿಂದ 4 ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದರು. ಆದರೆ, ಕೋವಿಡ್ ಆರಂಭವಾದ ಬಳಿಕ ಆಸ್ಪತ್ರೆಗೆ ಭೇಟಿ ಕೊಡುವವರ ಸಂಖ್ಯೆ 8 ರಿಂದ 10ಕ್ಕೆ ಏರಿಕೆಯಾಗಿದೆ. ಕೋವಿಡ್ ಆರಂಭದ ದಿನಗಳಲ್ಲಿ ಒಂದೆರಡು ತಿಂಗಳು ಆನ್​ಲೈನ್ ತರಗತಿ ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ, ದಿನೇದಿನೆ ಪ್ರಕರಣ ಹೆಚ್ಚಾಗಿದ್ದರಿಂದಾಗಿ ಆನ್​ಲೈನ್ ಕಲಿಕೆ ಅವಧಿಯೂ ವಿಸ್ತರಣೆಯಾಗಿದೆ. ಇದರಿಂದ ಇನ್ನೂ ಕೆಲ ಸಮಯ ಇ-ತರಗತಿ ಅನಿವಾರ್ಯ ಆಗಿರುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ನೇತ್ರತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

20-20-20- ರೂಲ್ಸ್ ಪಾಲಿಸಿ

(ನೇತ್ರತಜ್ಞರ ಸಲಹೆಗಳು)

  • ನಿತ್ಯ 2-3 ತಾಸಿಗಿಂತ ಹೆಚ್ಚು ಆನ್​ಲೈನ್ ತರಗತಿ ಬೇಡ
  • ಪ್ರತಿ 20 ನಿಮಿಷಕ್ಕೊಮ್ಮೆ ಡಿಜಿಟಲ್ ಡಿವೈಸ್ ವೀಕ್ಷಣೆಯಿಂದ ಕಣ್ಣಿಗೆ ವಿಶ್ರಾಂತಿ ಕೊಡಿ, 20 ಸೆಕೆಂಡ್ ಕಾಲ 20 ಅಡಿ ದೂರದ ವಸ್ತುಗಳನ್ನು ಪಟಪಟನೆ ಕಣ್ಣು ಮಿಟುಕಿಸಿ ನೋಡಿ
  • ಮಕ್ಕಳನ್ನು ಪ್ರತಿನಿತ್ಯ ಕೆಲ ಸಮಯ ಹೊರಗೆ(ಸುರಕ್ಷಿತ ಸ್ಥಳ) ಆಟವಾಡಲು ಬಿಡಿ
  • ಪ್ರತಿ ಆರು ತಿಂಗಳು ಇಲ್ಲವೇ ವರ್ಷಕ್ಕೊಮ್ಮೆ ಎಲ್ಲರೂ ಕಣ್ಣಿನ ತಪಾಸಣೆ ಮಾಡಿಸಿ
  • ನಿತ್ಯ ಕಣ್ಣಿನ ಗುಡ್ಡೆಗಳನ್ನು ಮೇಲೆ-ಕೆಳಗೆ, ಎಡಕ್ಕೆ-ಬಲಕ್ಕೆ ಆಡಿಸಿ ವ್ಯಾಯಾಮ ಮಾಡಿ

ಏನೆಲ್ಲ ಸಮಸ್ಯೆ?

  • ಆನ್​ಲೈನ್ ತರಗತಿಗಳಿಂದ ಎಳೆಯ ಮಕ್ಕಳ ದೃಷ್ಟಿ ಮೇಲೆ ತೀವ್ರ ಒತ್ತಡ
  • ಕಣ್ಣಿನಲ್ಲಿ ನೋವು, ಉರಿ, ತುರಿಕೆ, ನೀರು ಹರಿಯುತ್ತದೆ, ಕೆಂಪಾಗುತ್ತದೆ
  • ನಿರಂತರ ಡಿವೈಸ್ ವೀಕ್ಷಣೆಯಿಂದಾಗಿ ತಲೆನೋವು ಸಮಸ್ಯೆ ಆರಂಭ
  • ಕಣ್ಣಿನ ಮೇಲೆ ಒತ್ತಡ ಉಂಟಾಗಿ ದೂರದೃಷ್ಟಿ ಸಮಸ್ಯೆ ಶುರುವಾಗುತ್ತದೆ
  • ದೃಷ್ಟಿ ಮಸುಕಾಗುತ್ತದೆ, ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಹಾಕಬೇಕಾಗಬಹುದು

ಪಾಲಕರಿಗೆ ಸಲಹೆ

  • ಶಿಕ್ಷಕರು ಕಳುಹಿಸುವ ನೋಟ್ಸ್, ಫೋಟೋಗಳನ್ನು ಸಾಧ್ಯವಿದ್ದರೆ ನೀವೇ ಡೌನ್​ಲೌಡ್ ಮಾಡಿಕೊಡಿ
  •  ಕಣ್ಣಿನ ಉರಿ, ನೋವು ಕಾಣಿಸಿಕೊಂಡರೆ ಶಿಕ್ಷಕರಿಗೆ ತಿಳಿಸಿ ಸ್ವಲ್ಪ ದಿನ ಪಾಠ ನಿಲ್ಲಿಸಿ

ಆನ್​ಲೈನ್​ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಶಾಲೆ ಆರಂಭವಾಗುವ ಲಕ್ಷಣಗಳಿಲ್ಲದಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಬಹುದು. |ಸುಜಾತಾ ರಾಥೋಡ್, ನಿರ್ದೇಶಕಿ, ಮಿಂಟೋ ಆಸ್ಪತ್ರೆ ಮೊದಲು ಪ್ರತಿನಿತ್ಯ 3 ಅಥವಾ 4 ಮಕ್ಕಳು ಕಣ್ಣಿನ ಸಮಸ್ಯೆ ಎಂದು ಬರುತ್ತಿದ್ದರು. ಈಗ ಆ ಸಂಖ್ಯೆ 8 ರಿಂದ 10ಕ್ಕೆ ಏರಿಕೆಯಾಗಿದೆ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಬಳಿ ಕರೆದೊಯ್ದು ತೋರಿಸಿ. | ಡಾ.ಭುಜಂಗ ಶೆಟ್ಟಿ ನಾರಾಯಣ ನೇತ್ರಾಲಯ