ನ್ಯೂಸ್

ರಾಮಮಂದಿರ ಶಿಲಾನ್ಯಾಸಕ್ಕೆ ಕನ್ನಡಿಗರಿಂದ ಮುಹೂರ್ತ; ನಾಲ್ಕು ಮುಹೂರ್ತ ಇಟ್ಟುಕೊಟ್ಟ ಬೆಳಗಾವಿಯ ಎನ್.ಆರ್. ವಿಜಯೇಂದ್ರ ಶರ್ಮಾ

ಬೆಳಗಾವಿ: ಅಯೋಧ್ಯೆಯಲ್ಲಿ ಆ. 5ರಂದು ನಡೆಯಲಿರುವ ಶ್ರೀರಾಮ ಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿ ಪಡಿಸಿರುವುದು ತಾವೇ ಎಂದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯದ ರಾಘವೇಂದ್ರ ಮಠದ ಕುಲಪತಿ ಎನ್.ಆರ್. ವಿಜಯೇಂದ್ರ ಶರ್ಮಾ ತಿಳಿಸಿದ್ದಾರೆ.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜು. 29, ಜು. 31, ಆಗಸ್ಟ್ 3 ಹಾಗೂ ಆಗಸ್ಟ್ 5 ಸೇರಿ ನಾಲ್ಕು ದಿನಾಂಕಗಳನ್ನು ನೀಡಲಾಗಿತ್ತು. ಅದರಲ್ಲಿ ಆಗಸ್ಟ್ 5ರಂದು ಶ್ರಾವಣ ದ್ವಿತೀಯ ಬುಧವಾರ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಬಹುದು. ಇದು ಅಮೃತ ವಾಸ್ತು ಮುಹೂರ್ತವಾಗಿರುವುದರಿಂದ ಅತ್ಯುತ್ಕೃಷ್ಟವಾಗಿದೆ ಎಂದು ಶರ್ಮಾ ರಾಮ ಜನ್ಮಭೂಮಿ ಟ್ರಸ್ಟ್​ಗೆ ಮಾಹಿತಿ ನೀಡಿದ್ದರು.

ನಾಲ್ಕು ಮುಹೂರ್ತಗಳು: ಜು. 29ರಂದು ದ್ವಿತೀಯ ಪ್ರಾಶಸ್ಱ ಮುಹೂರ್ತವಾಗಿ ಬೆಳಗ್ಗೆ 9 ಗಂಟೆ ನಂತರ, ಜು. 31ರಂದು ವರದ ಮಹಾಲಕ್ಷ್ಮೀ ದಿನ ಶ್ರಾವಣ ಶುದ್ಧ ಶುಕ್ರವಾರ ಬೆಳಗ್ಗೆ 9 ಗಂಟೆ ನಂತರ, ಆ.3ರಂದು ಶ್ರಾವಣ ದ್ವಿತೀಯ ಸೋಮವಾರ ಬೆಳಗ್ಗೆ 10 ಗಂಟೆ ನಂತರ ಹಾಗೂ ಆ. 5ರಂದು ಬೆಳಗ್ಗೆ 8ರಿಂದ ಆರಂಭಿಸಬಹುದೆಂದು ದಿನಾಂಕ ನೀಡಲಾಗಿತ್ತು. ರಾಮ ಜನ್ಮಭೂಮಿ ಟ್ರಸ್ಟ್ ಆ. 5ರ ಮುಹೂರ್ತ ನಿಗದಿ ಪಡಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ರಾಮಮಂದಿರ ಟ್ರಸ್ಟ್​ನಲ್ಲಿರುವ ಹರಿದ್ವಾರ ಕ್ಷೇತ್ರದ ಗೋವಿಂದ ದೇವಗಿರಿ ಸ್ವಾಮೀಜಿ ಟ್ರಸ್ಟ್​ನ ಸಭೆಗೂ ಮೊದಲೇ ನನ್ನನ್ನು ಸಂರ್ಪಸಿ ಮುಹೂರ್ತ ನೀಡುವಂತೆ ಕೇಳಿದ್ದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನ ಬಂದಿತ್ತು. ಆದರೆ, ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಹೋಗಲು ಆಗುತ್ತಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.

ಸುಂದರ ಅಯೋಧ್ಯೆಗೆ 55 ಕೋಟಿ ರೂಪಾಯಿ ವೆಚ್ಚ: ಅಯೋಧ್ಯೆಯ ಬೈಪಾಸ್ ರಸ್ತೆ ನಿರ್ಮಾಣ ಹಾಗೂ ಸೌಂದಯೀಕರಣ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ 55 ಕೋಟಿ ವೆಚ್ಚವಾಗಲಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬೈಪಾಸ್ 16 ಕಿಲೋ ಮೀಟರ್ ಉದ್ದವಿರಲಿದ್ದು,  40 ಕೋಟಿಯನ್ನು ರಸ್ತೆ ನಿರ್ವಣಕ್ಕೆ ನೀಡಲಾಗಿದೆ.  15 ಕೋಟಿಯನ್ನು ಸೌಂದಯೀಕರಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

5ರಂದು ಲಕ್ಷ ತುಳಸಿ ಅರ್ಚನೆ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಆ.5ರಂದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೀಲಾವರ ಗೋಶಾಲೆಯಲ್ಲಿರುವ ಮಠದಲ್ಲಿ ಆರಾಧ್ಯಮೂರ್ತಿ ರಾಮವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡುವ ಸಂಕಲ್ಪ ಕೈಗೊಂಡಿದ್ದಾರೆ.