ನ್ಯೂಸ್

ಮನೆ ಮನೆಗೂ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

ರಾಣೆಬೆನ್ನೂರ: ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಹಿನ್ನೆಲೆಯಲ್ಲಿ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ವಿತರಣೆ ಕಾರ್ಯ ನಗರದಲ್ಲಿ ಭಾನುವಾರದಿಂದ ಪ್ರಾರಂಭವಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಸಮಿತಿ, ವಾರ್ಡ್ ಸಮಿತಿ, ರಾಮಭಕ್ತರ ಸಮಿತಿ ರಚಿಸಲಾಗಿದೆ. ಈ ಎಲ್ಲ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿ ಮನೆಗೂ ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೂ ಮಂತ್ರಾಕ್ಷತೆ ನೀಡಲಾಗುತ್ತಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾನ ದಿನದಂದು ಪ್ರತಿಯೊಬ್ಬರೂ ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಅಲ್ಲದೆ, ಕನಿಷ್ಠ ಐದು ದೀಪಗಳನ್ನು ಉತ್ತರದಿಕ್ಕಿಗೆ ಮುಖ ಮಾಡಿ ಹೊತ್ತಿಸಬೇಕು. ಅಲ್ಲದೆ, ಭಕ್ತರು ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಜನತೆಯಲ್ಲಿ ಮನವಿ ಮಾಡುತ್ತಿದ್ದಾರೆ.
ಪ್ರಮುಖರಾದ ರಮೇಶ ಗುತ್ತಲ, ಹನುಮಂತಪ್ಪ ಮುಕ್ತೇನಹಳ್ಳಿ, ವಸಂತ ಪೂಜಾರ, ಲಕ್ಷ್ಮಣ ಕಡ್ಲಿಬಾಳ, ನಾಗರಾಜ ಜಮಖಾನ, ಅಜಯ ಹುಲ್ಲತ್ತಿ, ಮಂಜುನಾಥ ಹಲಗೇರಿ, ಹನುಮಂತ ಎಣ್ಣಿಮನಿ, ಓಂ ಪ್ರಕಾಶ ಕುಮಾರಪ್ಪನವರ, ಗುರುರಾಜ ಕುಮಾರಪ್ಪನವರ, ಗೋಪಾಲ ಉದಗಟ್ಟಿ, ಕುಮಾರ ಎಳೆಗೂಳಿ, ಕುಮಾರ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.