ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯವಾಗಿದೆ. ಶನಿವಾರ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 5 ಕೋಟಿ ರೂ. ಪಡೆದು ವಂಚನೆ ಮಾಡಿದ್ದರು. ಈ ಸಂಬಂಧ ಹಿಂದುಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಶ್ರೀ ಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಸೇರಿದಂತೆ 8 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಮಹಜರ್ ನಡೆಸಿದ್ದರು. ಕಸ್ಟಡಿ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ರಕರಣದಲ್ಲಿ ಮೈಸೂರಿನ ವಕೀಲ ಪ್ರಣವ್ ಪ್ರಸಾದ್ ಅವರನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ನ್ಯಾಯಾಧೀಶರ ಮುಂದೆ ಪ್ರಣವ್ ಪ್ರಸಾದ್ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಅಭಿನವ ಹಾಲಶ್ರೀಗೆ ಆಪ್ತರಾಗಿದ್ದ ವಕೀಲ ಪ್ರಣವ್ ಪ್ರಸಾದ್ ಅವರ ಕಚೇರಿಯಲ್ಲಿ ಸ್ವಾಮೀಜಿ ಕಾರು ಚಾಲಕ 60 ಲಕ್ಷ ರೂ. ನಗದು ಇದ್ದ ಬ್ಯಾಗ್ ಇಟ್ಟಿದ್ದ. ಕೆಲ ದಿನಗಳ ಬಳಿಕ 4 ಲಕ್ಷ ರೂ. ಅನ್ನು ತೆಗೆದುಕೊಂಡು ಉಳಿಕೆ ಹಣವನ್ನು ಅಲ್ಲಿಯೇ ಬಿಟ್ಟಿದ್ದ. ಇತ್ತ ಹಾಲಶ್ರೀ ಬಂಧನಕ್ಕೆ ಒಳಗಾಗುತ್ತಿದಂತೆ ವಕೀಲ ಪ್ರಣವ್ ಪ್ರಸಾದ್, ಹಣವಿದ್ದ ಬ್ಯಾಗ್‌ನ್ನು ಮಠದಲ್ಲಿ ಇಟ್ಟು ಸಿಸಿಬಿ ಪೊಲೀಸರಿಗೆ ಪತ್ರ ಬರೆದಿದ್ದರು. ಅಲ್ಲದೆ, ಸಿಸಿಬಿ ಕಚೇರಿಗೆ ಹಾಜರಾಗಿ ಹೇಳಿಕೆ ಸಹ ದಾಖಲಿಸಿದ್ದರು.