ನ್ಯೂಸ್

ಆಹಾರ ವಿಜ್ಞಾನ, ಕೃಷಿ ಕೋರ್ಸ್ ಎಲ್ಲ ಸೀಟು ಭರ್ತಿ: ಇಂಜಿನಿಯರಿಂಗ್‌ನಲ್ಲಿ 13,653 ಸೀಟು ಉಳಿಕೆ

ಬೆಂಗಳೂರು ಯುಜಿಸಿಇಟಿ-24ರ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, 79,907 ಇಂಜಿನಿಯರಿಂಗ್ ಸೀಟುಗಳಲ್ಲಿ 13,653 ಇಂಜಿನಿಯರಿಂಗ್ ಸೀಟುಗಳು ಬಾಕಿ ಉಳಿದಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ (ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹೊರತುಪಡಿಸಿ) ಒಟ್ಟು 1,11,294 ಸೀಟುಗಳ ಪೈಕಿ 85,259 ಸೀಟುಗಳು ಹಂಚಿಕೆಯಾಗಿದ್ದು, 26,036 ಸೀಟುಗಳು ಉಳಿದಿವೆ ಎಂದು ವಿವರಿಸಿದ್ದಾರೆ.

ಆದರೆ, ಆಹಾರ ವಿಜ್ಞಾನ ಕೊರ್ಸ್‌ನ 207, ಕೃಷಿ 1,315, ರೇಷ್ಮೆ 72 ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳ 316 ಸೀಟುಗಳು ಸಂಪೂರ್ಣವಾಗಿ ಭರ್ತಿಯಾಗಿದೆ.

ಫಾರ್ಮಸಿ ವಿಭಾಗದಲ್ಲಿ 401, ನರ್ಸಿಂಗ್‌ನಲ್ಲಿ 11,673, ಯೋಗ ನ್ಯಾಚುರೋಪತಿ 125, ಕೃಷಿ (ಪ್ರಾಕ್ಟಿಕಲ್) 134 ಸೀಟುಗಳು ಹಂಚಿಕೆಗೆ ಬಾಕಿ ಇವೆ. ಎರಡನೇ ಮುಂದುವರಿದ ಸುತ್ತಿನಲ್ಲಿ ಕೇವಲ ಸರ್ಕಾರಿ ಕೋಟಾದ ಸೀಟುಗಳನ್ನು ಮಾತ್ರ ಕೆಇಎ ಮೂಲಕ ಹಂಚಿಕೆ ಮಾಡಲು ಸರ್ಕಾರದಿಂದ ನಿರ್ದೇಶನ ಇದ್ದ ಕಾರಣ ಖಾಸಗಿ ಕೋಟಾದ ಸೀಟುಗಳನ್ನು ಹಂಚಿಕೆ ಮಾಡಿಲ್ಲ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ನರ್ಸಿಂಗ್ ಸೀಟುಗಳು ಉಳಿದಿವೆ ಎಂದು ಅವರು ತಿಳಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 79,907 ಸೀಟುಗಳ ಪೈಕಿ 66,254 ಸೀಟು ಹಂಚಿಕೆಯಾಗಿವೆ. ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಇಂಜಿನಿಯರಿಂಗ್ ಕೋರ್ಸ್‌ಗಳ ಸೀಟುಗಳು ಕೆಲವು ಬಿಟ್ಟರೆ ಬಹುತೇಕ ಎಲ್ಲ ಕಾಲೇಜುಗಳಲ್ಲೂ ಭರ್ತಿಯಾಗಿವೆ. ಆದರೆ, ಸಿವಿಲ್, ಮ್ಯಾಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸೀಟುಗಳು ಹಂಚಿಕೆಯಾಗಿವೆ.

ಹಾಗೆಯೇ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಒಟ್ಟು 18,794 ಸೀಟುಗಳು ಇದ್ದು, ಅದರಲ್ಲಿ 18,157 ಸೀಟು ಹಂಚಿಕೆಯಾಗಿವೆ. ಇಲ್ಲೂ 637 ಸೀಟುಗಳನ್ನು ಯಾರೂ ತೆಗೆದುಕೊಂಡಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚು ಬಾಕಿ ಉಳಿದ ಸೀಟುಗಳು

ವಿಭಾಗ ಒಟ್ಟು ಸೀಟು ಉಳಿಕೆ ಸೀಟು

ಸಿವಿಲ್ ಇಂಜಿನಿಯರಿಂಗ್ 5,723 2,840

ಮೆಕಾನಿಕಲ್ 5,977 3,194