ಶಿವಮೊಗ್ಗ: ಪರಿಸರ ನಾಶವಾಗಿ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಭೂಮಿಯೇ ಇಲ್ಲವಾಗಿ ಆಹಾರ ಸಮಸ್ಯೆ ತಲೆದೋರಬಹುದು. ಎಚ್ಚೆತ್ತುಕೊಳ್ಳದಿದ್ದರೆ ಇಡೀ ಭೂಮಿಯೇ ವಿನಾಶದತ್ತ ಸಾಗುತ್ತದೆ ಎಂದು ಪರಿಸರ ಚಿಂತಕ ತೀರ್ಥಹಳ್ಳಿಯ ಶ್ರೀಧರ್ ಕಲ್ಲಹಳ್ಳ ಆತಂಕ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಹ್ಯಾದ್ರಿ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಎಂಪಿಎಂ ಕಾರ್ಖಾನೆ ಮುಚ್ಚಿದ್ದರೂ ಸುಮಾರು ಒಂದು ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಮತ್ತೆ ಗುತ್ತಿಗೆಗೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಆ ಭೂಮಿಯಲ್ಲಿ ಅಕೇಶಿಯ ಮತ್ತು ನೀಲಗಿರಿ ಬೆಳೆದ ಪರಿಣಾಮ ಭೂಮಿಯ ಲವತ್ತತೆ ನಾಶವಾಗಿದೆ. ಇಡೀ ಅರಣ್ಯಕ್ಕೆ ಬೆಂಕಿ ಹಚ್ಚಿ ಬೋಲ್ಡೋಜರ್ ಹರಿಸಿ ಅವಾಂತರ ಮಾಡಲಾಗಿದೆ. ಈಗ ಮತ್ತೆ ಗುತ್ತಿಗೆ ಅವಧಿ ವಿಸ್ತರಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಮರಳುಗಾರಿಕೆ ನಡೆಯುತ್ತಿದೆ. ರಾಜಕಾರಣಿಗಳು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರಿಗೆ ಪರಿಸರದ ಬಗ್ಗೆ ಕಾಳಜಿಯಿಲ್ಲ. ಸರ್ಕಾರಕ್ಕೂ ದೂರದೃಷ್ಟಿಯಿಲ್ಲ. ಹೀಗಾಗಿ ಪರಿಸರ ಉಳಿಸುವುದೇ ಇಂದಿನ ಬಹುದೊಡ್ಡ ಸವಾಲು ಎಂದು ಹೇಳಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ್ ಮರ‌್ಗನಳ್ಳಿ ಮಾತನಾಡಿ, ತಾಪಮಾನ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಅಭಿವೃದ್ಧಿ ಕಾರ್ಯಗಳು ನಿಸರ್ಗವನ್ನು ಬಲಿ ಪಡೆಯುತ್ತಿವೆ. ಇದರಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಇಂತಹ ಸಂದರ್ಭದಲ್ಲಿ ಪರಿಸರದ ಉಳಿವು ಎಲ್ಲರ ಕರ್ತವ್ಯ ಎಂದರು.
ಪರಿಸರ ಕುರಿತ ಕಿರುಚಿತ್ರ ವೀಕ್ಷಣೆ, ವಿದ್ಯಾರ್ಥಿಗಳಿಗೆ ಗಿಡ ವಿತರಣೆ, ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಚಾರ್ಯ ಡಾ. ಟಿ.ಅವಿನಾಶ್, ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ , ಮಲೆನಾಡು ರೋಟರಿ ಕ್ಲಬ್ ಅಧ್ಯಕ್ಷ ಮುಷ್ತಾಕ್ ಅಲಿ, ಉಪವಲಯ ಅರಣ್ಯಾಧಿಕಾರಿ ಪಿ.ಶರತ್‌ಕುಮಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಶಿವಮೂರ್ತಿ, ಐಕ್ಯುಎಸಿ ಸಂಚಾಲಕಿ ಡಾ. ಕೆ.ಎಸ್.ಸರಳಾ ಇತರರಿದ್ದರು.