ಸೊರಬದ ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮೇಘಶ್ರೀ ಉದ್ಘಾಟಿಸಿದರು. ವಿಜಯಕುಮಾರ್ ದಡ್ಡೇರ್, ರೇಣುಕಮ್ಮ ಗೌಳಿ, ಷಣ್ಮುಖ ಆಚಾರ್ ಇತರರಿದ್ದರು.  
ನ್ಯೂಸ್

ಮಹಾತ್ಮರ ಆದರ್ಶ ಪಾಲನೆ ಮಾಡಿ

ಸೊರಬ: ಜೀವನದಲ್ಲಿ ಕತ್ತಲನ್ನು ಹೋಗಲಾಡಿಸಿ ಬೆಳಕು ಕಾಣಲು ಹಾಗೂ ಬದುಕನ್ನು ಸುಂದರವಾಗಿಸಲು ಮಹಾತ್ಮರ ಜಯಂತಿ ಆಚರಣೆಗಳು ಬದುಕಿಗೆ ಪೂರಕವಾಗಿವೆ ಎಂದು ಜಡೆ ಸಂಸ್ಥಾನ ಮಠದ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.

ಮಂಗಳವಾರ ಪಟ್ಟಣದ ಎಚ್‌ಪಿಆರ್ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಕದಳಿ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಕಾಯಕಯೋಗಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಾತ್ಮರು, ಶಿವಯೋಗಿಗಳು ಬದುಕಿನಲ್ಲಿ ಎಲ್ಲರೂ ಸಮಾನರು ಎಂದು ಒಪ್ಪಿಕೊಂಡು ಸ್ಥಿರ ಸಮಾಜ ನಿರ್ಮಾಣಕ್ಕೆ ಮುಂದಾದರು. ಶಿವಕುಮಾರ ಸ್ವಾಮೀಜಿ ಅವರು ಅಕ್ಷರ, ಅರಿವು, ದಾಸೋಹಕ್ಕೆ ಮಠದಲ್ಲಿ ಒತ್ತು ನೀಡಿ ಮಹಾನ್ ಕಾಯಕ ಯೋಗಿಯಾದರು. ಸರಳ ಬದುಕು ನಡೆಸಿ ನಮ್ಮೆಲ್ಲರಿಗೂ ಆದರ್ಶವಾದರು. ಶಿವಯೋಗಿಗಳು ಕಾಯಕ, ದಾಸೋಹ, ಶಿಕ್ಷಣದ ಬೀಜ ಬಿತ್ತುವ ಮೂಲಕ ಸಮಾಜದ ಬದಲಾವಣೆಗೆ ನಾಂದಿ ಹಾಡಿದ್ದರು ಎಂದರು.

ಎಚ್‌ಪಿಆರ್ ನರ್ಸಿಂಗ್ ಕಾಲೇಜ್ ಮುಖ್ಯಸ್ಥೆ ಮೇಘಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಬಸವಣ್ಣ ಅವರೊಂದಿಗೆ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ದಾಸೋಹ, ಅಕ್ಷರ, ಅರಿವು ಕಾರ್ಯಕ್ರಮವನ್ನು ನಾಡಿಗೆ ಬಿತ್ತರಿಸಿದ ಶಿವಕುಮಾರ ಸ್ವಾಮಿಗಳ ಆದರ್ಶ ತತ್ವಗಳು ಜೀವಂತವಾಗಿ ಉಳಿಯಲಿವೆ. ಮಹಾತ್ಮರ ಜಯಂತಿ ಆಚರಣೆ ಜತೆಗೆ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ ಆಗಲಿದೆ ಎಂದರು.

ಸಿದ್ಧಗಂಗಾ ಶ್ರೀಗಳ ಕುರಿತು ಸೊರಬ ಪಿಯು ಕಾಲೇಜು ಉಪನ್ಯಾಸಕ ವಿಜಯಕುಮಾರ್ ದಡ್ಡೇರ್ ಉಪನ್ಯಾಸ ನೀಡಿದರು. ಕದಳಿ ವೇದಿಕೆ ಅಧ್ಯಕ್ಷೆ ರೇಣುಕಮ್ಮ ಗೌಳಿ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖ ಆಚಾರ್, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೆಟ್, ಸೊರಬ ಸರ್ಕಾರಿ ಆಸ್ಪತ್ರೆ ಆಡಳಿತಾಕಾರಿ ಡಾ. ಪ್ರಭು ಸಾಹುಕಾರ್, ಉದ್ಯಮಿ ನಾಗರಾಜ್ ಗುತ್ತಿ, ಡಿ.ಶಿವಯೋಗಿ, ಶಿವಾನಂದ್ ಪೂರ್ಣಿಮಾ, ರಚನಾ, ಸಿಂಧು ಇತರರಿದ್ದರು.